ಪತ್ನಿಯ ಮನೆಗೆ ಹೋಗಲು ನಿಲ್ಲಿಸಿದ್ದ ಬಸ್ ನ್ನು ಕದ್ದ ಪತಿ!
ಕೋಝಿಕ್ಕೋಡ್: ಕೇರಳದಲ್ಲಿ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗದೇ ಪರದಾಡುತ್ತಿದ್ದ ಪತಿ ಸಾಹಸಕ್ಕೆ ಕೈ ಹಾಕಿದ್ದು, ಬಸ್ಸೊಂದನ್ನು ಕದ್ದು ಪತ್ನಿಯ ಮನೆಯ ದಾರಿ ಹಿಡಿದಿದ್ದಾನೆ.
30 ವರ್ಷ ವಯಸ್ಸಿನ ಡಿನೂಪ್ ಈ ಸಾಹಸಕ್ಕೆ ಕೈ ಹಾಕಿದ ಪತಿಯಾಗಿದ್ದು, ಶನಿವಾರ ತನ್ನ ಪತ್ನಿಯ ಮನೆಗೆ ತೆರಳಲು ಕೋಝಿಕೋಡ್ ಬಳಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ನ್ನು ಕದ್ದು ತಿರುವಲ್ಲಕ್ಕೆ ಪ್ರಯಾಣ ಆರಂಭಿಸಿದ್ದಾನೆ.
ದಾರಿಯಲ್ಲಿ ಎರಡು ಬಾರಿ ಪೊಲೀಸರು ಎದುರಾದಾಗ ಪಥನಮತ್ತತ್ತದಿಂದ ಕಾರ್ಮಿಕರನ್ನು ಕರೆತರಲು ಹೋಗುತ್ತಿರುವುದಾಗಿ ಆತ ಹೇಳಿದ್ದ. ಈ ವೇಳೆ ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ ಮತ್ತು ಕೊಟ್ಟಾಯಂ ಜಿಲ್ಲೆಗೆ ಆತ ತೆರಳಿದ್ದಾನೆ. ಆದರೆ, ಕುಮಾರಕೋಮ್ ಗೆ ಬಂದಾಗ ಪೊಲೀಸರು ಆತನನ್ನು ತಡೆದಿದ್ದು, ಸರಿಯಾಗಿ ವಿಚಾರಣೆ ನಡೆಸಿದ ವೇಳೆ ಕದ್ದ ಬಸ್ ಓಡಿಸುತ್ತಿರುವುದು ಅವರ ಅರಿವಿಗೆ ಬಂತು.
ಈ ವೇಳೆ ಬಸ್ ನ ನೋಂದಣಿ ಸಂಖ್ಯೆ ಆಧರಿಸಿ, ಬಸ್ ಮಾಲಕರ ವಿವರಗಳನ್ನು ಪಡೆದು ಪೊಲೀಸರು ಕರೆ ಮಾಡಿದಾಗ, ನಿಲ್ಲಿದ್ದ ಬಸ್ ನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಇನ್ನೂ ಘಟನೆ ಸಂಬಂಧ ಡಿನೂಪ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆತ ಹೇಳಿರುವುದು ಸತ್ಯವೋ ಅಥವಾ ಆತ ಬಸ್ ನ್ನು ಉದ್ದೇಶಪೂರ್ವಕವಾಗಿಯೇ ಕದ್ದಿದ್ದಾನೆಯೇ ಅಥವಾ ಪತ್ನಿಯ ಮನೆಗೆ ಹೋಗಲು ಈ ಕೆಲಸ ಮಾಡಿದ್ದಾನೆಯೇ ಎನ್ನುವ ಎರಡು ಕೋನಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.