ಪತ್ರಕರ್ತ ಹಾಗೂ ಆತನ ಪತ್ನಿಯನ್ನು ಮಾರಣಾಂತಿಕವಾಗಿ ಥಳಿಸಿ ಹತ್ಯೆ
18/11/2020
ಲಕ್ನೋ: ಪತ್ರಕರ್ತ ಹಾಗೂ ಆತನ ಪತ್ನಿಯನ್ನು ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಹಿಂದಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದಯ್ ಪಾಸ್ವಾನ್ ಹಾಗೂ ಆತನ ಪತ್ನಿಯನ್ನು ಮಾರಣಾಂತಿಕವಾಗಿ ಥಳಿಸಿ ಹತ್ಯೆ ಮಾಡಲಾಗಿದೆ. ಭೀಕರ ಹಲ್ಲೆಯ ಪರಿಣಾಮ ಪಾಸ್ವಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಅವರ ಪತ್ನಿ ವಾರಣಾಸಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭೀಕರ ಹಲ್ಲೆಗೆ ಸಂಬಂಧಿಸಿ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ, ಗ್ರಾಮದ ಮಾಜಿ ಅಧ್ಯಕ್ಷ ಕೆವಲ್ ಪಾಸ್ವಾನ್ ತಲೆ ಮರೆಸಿಕೊಂಡಿದ್ದಾನೆ. ಉದಯ್ ಪಾಸ್ವಾನ್ ತನಗೆ ಭದ್ರತೆ ನೀಡುವಂತೆ ಕೋನ್ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ಆದರೆ ಈ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ತವ್ಯ ಲೋಪದ ಮೇರೆಗೆ ಘಟನೆಯ ಬಳಿಕ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.