ಮಕ್ಕಳ ಜಗಳದ ವಿಷಯದಲ್ಲಿ ಪತಿ ಪತ್ನಿಯರ ನಡುವೆ ಕಲಹ ನಡೆದು ದುರಂತ ಅಂತ್ಯ!
ಮೈಸೂರು: ಮಕ್ಕಳು ಜಗಳವಾಡಿದ ವಿಚಾರದಲ್ಲಿ ಪತಿಯು ಪತ್ನಿಗೆ ಬುದ್ಧಿವಾದ ಹೇಳಿದ್ದು, ಪತಿಯ ಈ ವರ್ತನೆಯಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿಯು ಯಾವ ರೀತಿ ಬುದ್ಧಿ ಹೇಳಿದ್ದಾರೆ ತಿಳಿದಿಲ್ಲ. ಆದರೆ ಮಕ್ಕಳ ಗಲಾಟೆ ವಿಚಾರವಾಗಿ ಪತಿ-ಪತ್ನಿಯರ ನಡುವೆ ಕಲಹಕ್ಕೆ ಕಾರಣವಾಗಿದ್ದು, ದುರಂತ ಅಂತ್ಯವಾಗಿದೆ.
ಮೈಸೂರಿನ ವಿಜಯನಗರ ಬಡಾವಣೆಯ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. 28 ವರ್ಷದ ನಂದಿನಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಮಹಿಳೆಯಾಗಿದ್ದ ನಂದಿನಿ 5 ವರ್ಷಗಳ ಹಿಂದೆ ಮೈಸೂರಿನ ಅಭಿಲಾಷ್ ಅವರನ್ನು ಮದುವೆಯಾಗಿದ್ದರು.
ಪ್ರಾಥಮಿಕ ಮಾಹಿತಿಯ ಪ್ರಕಾರ ನಂದಿನಿ ಅವರಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳು ತಮ್ಮ ವಯಸ್ಸಿಗೆ ಸಹಜವಾಗಿ ಜಗಳವಾಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಪತ್ನಿಯರ ನಡುವೆ ಕಲಹ ಏರ್ಪಟ್ಟಿದೆ. ಮಕ್ಕಳನ್ನು ಸಮಾಧಾನ ಮಾಡುವಂತೆ ಗಂಡ ಬುದ್ಧಿವಾದ ಹೇಳಿದ್ದಾರೆನ್ನಲಾಗಿದ್ದು, ಇದರಿಂದ ನೊಂದ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.