ಮೂರನೇ ಮದುವೆಗೆ ಸಿದ್ಧನಾದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ!

wife
26/06/2021

ಲಕ್ನೋ: ಮೂರನೇ ಮದುವೆಗೆ ಸಿದ್ಧನಾಗಿದ್ದ 57 ವರ್ಷ ವಯಸ್ಸಿನ ವ್ಯಕ್ತಿಯ ಮರ್ಮಾಂಗವನ್ನೇ ಪತ್ನಿಯೋರ್ವಳು ಕತ್ತರಿಸಿದ ಘಟನೆ ಶಿಕರ್ ಪುರ್ ಗ್ರಾಮದಲ್ಲಿ  ನಡೆದಿದ್ದು, ಪರಿಣಾಮವಾಗಿ ಪತಿ ಸಾವನ್ನಪ್ಪಿದ್ದಾನೆ.

ಮೌಲ್ವಿ ವಕೀಲ್ ಅಹ್ಮದ್ ಈಗಾಗಲೇ ಎರಡು ಮದುವೆಯಾಗಿದ್ದ. ಇನ್ನೊಂದು ಮದುವೆಗೆ ಆತ ಸಿದ್ಧನಾಗುತ್ತಿದ್ದ. ಈ ವಿಚಾರವಾಗಿ ಗುರುವಾರ ಈತನ ಎರಡನೇ ಪತ್ನಿ ಹಜ್ರಾ ವಿರೋಧ ವ್ಯಕ್ತಪಡಿಸಿದ್ದಳು. ಇದಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ಉಂಟಾಗಿ ಮೌಲ್ವಿ ಪತ್ನಿಗೆ  ಥಳಿಸಿದ್ದನೆನ್ನಲಾಗಿದೆ.

ಪತಿ ಮತ್ತೊಂದು ಮದುವೆಗೆ ಸಿದ್ಧನಾಗಿರುವುದನ್ನು ಸಹಿಸದ ಹಜ್ರಾ, ರಾತ್ರಿ ಆತ ಮಲಗಿದ್ದ ವೇಳೆ ಆತನ ಗುಪ್ತಾಂಗವನ್ನೇ ಚಾಕುವಿನಿಂದ ಕತ್ತರಿಸಿದ್ದಾಳೆ.  ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಪತಿ ಸಾವನ್ನಪ್ಪಿದ್ದಾನೆ.

ಬಳಿಕ ಬೆಳಗ್ಗೆ ಪತಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ ಹಜ್ರಾ ತನ್ನ ಸಂಬಂಧಿಕರ ಸಹಾಯದೊಂದಿಗೆ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾಳೆ. ಈ ವೇಳೆ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಶ್ನಿಸಿದಾಗ ಹಜ್ರಾ ತಪ್ಪೊಪ್ಪಿಕೊಂಡಿದ್ದಾಳೆ.

ಘಟನೆ ಸಂಬಂಧ ಹಜ್ರಾ ವಿರುದ್ಧ ಭೋರಕ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ನಿತೇಂದ್ರ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version