ಪತಿಯನ್ನು ಮನೆಯೊಳಗೆ ಕೂಡಿಹಾಕಿ ಮಗುವಿನೊಂದಿಗೆ ಬಹುಮಹಡಿ ಕಟ್ಟಡದಿಂದ ಹಾರಿದ ಮಹಿಳೆ - Mahanayaka

ಪತಿಯನ್ನು ಮನೆಯೊಳಗೆ ಕೂಡಿಹಾಕಿ ಮಗುವಿನೊಂದಿಗೆ ಬಹುಮಹಡಿ ಕಟ್ಟಡದಿಂದ ಹಾರಿದ ಮಹಿಳೆ

04/02/2021

ಹೈದರಾಬಾದ್: ಪತಿಯನ್ನು ಮನೆಯೊಳಗೆ ಕೂಡಿ ಹಾಕಿ ಬಾಗಿಲಿಗೆ ಲಾಕ್ ಮಾಡಿ ಪತ್ನಿ ತನ್ನ 8 ತಿಂಗಳ ಮಗುವಿನೊಂದಿಗೆ  ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಬಿಹಾರ ಮೂಲದ 24 ವರ್ಷದ ಅನಿತಾ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಬಿಸ್ಮಲ್ ಸಿಂಗ್ ಎಂಬವರನ್ನು ವಿವಾಹವಾಗಿದ್ದ ಈಕೆಗೆ 8 ತಿಂಗಳ ಮಗುವಿನೊಂದಿಗೆ ಇಲ್ಲಿನ ಬಂಜಾರಾ ಹಿಲ್ಸ್ ನ ಶ್ರೀರಾಮ್ ನಗರ ಕಾಲನಿಯಲ್ಲಿ  ಮೂರು ತಿಂಗಳಿನಿಂದ ವಾಸವಾಗಿದ್ದರು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ದಂಪತಿಯ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಇದನ್ನು ಸರಿಪಡಿಸಲು ಸಂಬಂಧಿಕರು ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಸೋಮವಾರವೂ ಎಂದಿನಂತೆಯೇ ಜಗಳ ನಡೆದಿದ್ದು,  ಈ ನಡುವೆ ಅನಿತಾ ತಾಳ್ಮೆ ಕಳೆದುಕೊಂಡು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ಪತಿಯನ್ನು ಮನೆಯ ಒಳಗೆ ಕೂಡಿ ಹಾಕಿ, ಬಾಗಿಲನ್ನ ಲಾಕ್ ಮಾಡಿ, ಮಗುವಿನೊಂದಿಗೆ ಎರಡನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ.

ಘಟನೆಯ ಪರಿಣಾಮ ನೆಲಕ್ಕೆ ಅಪ್ಪಳಿಸಿ ಅನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ 8 ತಿಂಗಳ ಮಗುವಿನ ಸ್ಥಿತಿ ಗಂಭೀರವಾಗಿದೆ. ಅಂತೂ ದಂಪತಿಯ ಜಗಳ ದುರಂತದಲ್ಲಿ ಅಂತ್ಯವಾಗಿದೆ.

ಇತ್ತೀಚಿನ ಸುದ್ದಿ