ಹೋಳಿಯ ಹೆಸರಲ್ಲಿ ಹಿಂದೂ ಮುಸ್ಲಿಮರ ವಿಭಜನೆ ಯತ್ನ: ತಕ್ಕ ಉತ್ತರ ನೀಡಿದ ದೆಹಲಿಯ ಸೀಲಾಂಪುರ್ ಜನರು

ಹೋಳಿಯ ಹೆಸರಲ್ಲಿ ಹಿಂದೂ ಮುಸ್ಲಿಮರನ್ನು ವಿಭಜಿಸುವ ಶಕ್ತಿಗಳಿಗೆ ದೆಹಲಿಯ ಸೀಲಾಂಪುರ್ ನ ನಿವಾಸಿಗಳು ತಕ್ಕ ಉತ್ತರವನ್ನು ನೀಡಿದ್ದಾರೆ. ಹೋಳಿಯ ದಿನವಾದ ಶುಕ್ರವಾರದಂದು ಮುಸ್ಲಿಮರು ಮಸೀದಿಗೆ ಹೋಗದೆ ಮನೆಯಲ್ಲೇ ಇರಿ ಎಂದು ಉತ್ತರ ಪ್ರದೇಶದ ಡಿಜೆಪಿ ಹೇಳಿದ್ದರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅದನ್ನು ಸಮರ್ಥಿಸಿದ್ದರು. ಉತ್ತರ ಪ್ರದೇಶದ ಹಲವು ಮಸೀದಿಗಳನ್ನು ಟಾರ್ಪಲ್ ಹಾಸಿ ಮುಚ್ಚಲಾಗಿತ್ತು.
ಇದೀಗ ಈ ಎಲ್ಲಾ ಕ್ರಮಗಳನ್ನು ಪ್ರಶ್ನಿಸುವಂತೆ ದೆಹಲಿಯ ಸೀಲಾಂಪುರ್ ನಿವಾಸಿಗಳು ನಡಕೊಂಡಿದ್ದಾರೆ. ಜುಮಾ ನಮಾಜ್ ಮುಗಿಸಿ ಮರಳಿದ ಮುಸ್ಲಿಮರಿಗೆ ಹೂವಿನ ಎಸಳುಗಳನ್ನು ಎಸೆದು ಸ್ವಾಗತಿಸುವ ಮೂಲಕ ಇಲ್ಲಿನ ಹಿಂದುಗಳು ಸಾಮರಸ್ಯದ ಸಂದೇಶವನ್ನು ಹರಡಿದ್ದಾರೆ.
ಧಾರ್ಮಿಕ ಸಾಮರಸ್ಯದ ಅತ್ಯುತ್ತಮ ಉದಾಹರಣೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ದೃಶ್ಯವನ್ನು ಕೊಂಡಾಡಲಾಗಿದೆ. ವಿವಿಧ ಹೂಗಳ ಎಸಳುಗಳನ್ನು ಮುಸ್ಲಿಮರ ಮೇಲೆ ಎಸೆದು ಸಂತೋಷ ವ್ಯಕ್ತಪಡಿಸಿದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ
ಧರ್ಮದ ಹೆಸರಲ್ಲಿ ವಿಭಜನೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಈ ದೃಶ್ಯ ಅವೆಲ್ಲವನ್ನೂ ಮರೆಸುವಷ್ಟು ಶಕ್ತಿಶಾಲಿಯಾಗಿದೆ ಎಂದು ಸೋಶಿಯಲ್ ಮೀಡಿಯಾದ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೋಳಿಗೆ ಬಹಳ ದೊಡ್ಡ ಸಾಮರಸ್ಯದ ಪರಂಪರೆ ಇದೆ ಹಿಂದೂ ಮುಸ್ಲಿಮರು ಜೊತೆಯಾಗಿ ಈ ಹಬ್ಬವನ್ನ ಸಂಭ್ರಮಿಸುತ್ತ ಬಂದಿದ್ದಾರೆ. ಆದರೆ ಈ ವರ್ಷ ಈ ಹೋಳಿಯನ್ನು ಮುಸ್ಲಿಂ ವಿರೋಧಿಯಾಗಿ ಬಿಂಬಿಸುವ ಯೋಜಿತ ಪ್ರಯತ್ನಗಳು ನಡೆದಿವೆ. ಅಲ್ಲದೆ ಕಾಕತಾಳೀಯ ಎಂಬಂತೆ ಈ ಬಾರಿ ಹೋಳಿ ಶುಕ್ರವಾರವೇ ಬಂದಿದೆ. ಶುಕ್ರವಾರ ಮುಸ್ಲಿಮರ ಜುಮ ನಮಾಜು ಕೂಡ ಇದೆ. ಅದು ಅವರ ಪಾಲಿಗೆ ಅತ್ಯಂತ ಮುಖ್ಯವಾದದ್ದು. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಅಲ್ಲಿನ ಪೊಲೀಸರು ಇದನ್ನೇ ನೆಪವಾಗಿಟ್ಟುಕೊಂಡು ಮುಸ್ಲಿಮರನ್ನು ಸತಾಯಿಸಲು ನೋಡಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯ ಜನರು ಇಂಥದ್ದೊಂದು ಸೌಹಾರ್ದ ಸಂದೇಶವನ್ನು ಸಾರಿದ್ದು ಹೋಳಿಯ ಹೆಸರಲ್ಲಿ ಧರ್ಮ ದ್ವೇಷ ಹರಡುವವರಿಗೆ ಪಾಠವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೋಳಿಗೆ ಸಂಬಂಧಿಸಿ ಉತ್ತರ ಪ್ರದೇಶದ ಶಾಹಿಹಾನ್ ಪುರದಲ್ಲಿ 70 ಮಸೀದಿಗಳನ್ನು ಟಾರ್ಪಲ್ ಹಾಸಿ ಮುಚ್ಚಲಾಗಿತ್ತು. ಹೋಳಿ ಆಚರಿಸುವವರು ಇವುಗಳಿಗೆ ಬಣ್ಣ ಎಸೆದರೂ ಹಾನಿಯಾಗದೆ ಇರುವುದಕ್ಕೆ ಈ ಕ್ರಮವನ್ನ ಕೈಗೊಳ್ಳಲಾಗಿತ್ತು. ಹೋಳಿಯ ಸಂದರ್ಭದಲ್ಲಿ ತಮ್ಮ ಮೇಲೆ ಬಣ್ಣ ಬೀಳದೆ ಇರಬೇಕಾದರೆ ಮುಸ್ಲಿಂ ಪುರುಷರು ತಮ್ಮ ಮೇಲೆ ಟರ್ಪಾಲನ್ನು ಹೊದ್ದುಕೊಳ್ಳಲಿ ಎಂದು ಉತ್ತರ ಪ್ರದೇಶದ ಸಚಿವ ರಘುರಾಜ್ ಸಿಂಗ್ ಹೇಳಿಕೆಯನ್ನ ನೀಡಿದ್ದರು. ಈ ಎಲ್ಲಕ್ಕೂ ದೆಹಲಿಯ ಸೀತಾಂಪುರ ನಿವಾಸಿಗಳು ಉತ್ತರ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj