ನೇಜಾರು ಅಮಾನುಷ ಹತ್ಯೆ ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ
ಉಡುಪಿ: ಜಿಲ್ಲೆಯ ಇತಿಹಾಸದಲ್ಲೇ ನೇಜಾರು ತೃಪ್ತಿ ಲೇಔಟ್ ನಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಮಂದಿಯ ಅಮಾನುಷ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಸಿಸಿ ಟಿವಿ ಹಾಗೂ ಇನ್ನಿತರ ಮೂಲಗಳ ಜಾಡು ಹಿಡಿದು ಕೊಲೆ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಆರೋಪಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸಿ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯ ಸುಶಿಕ್ಷಿತ ಜನತೆ ಕಾನೂನು ಸುವ್ಯವಸ್ಥೆಯೊಂದಿಗೆ ನಿರ್ಭೀತಿಯಿಂದ ಸಹಬಾಳ್ವೆಯನ್ನು ನಡೆಸುತ್ತಿದ್ದು, ಈ ಅಮಾನುಷ ಹತ್ಯೆ ಪ್ರಕರಣ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿಯನ್ನು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲು ತಂಡಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಿರುವುದನ್ನೂ ಖಚಿತಪಡಿಸಿದ್ದಾರೆ.
ಪೊಲೀಸರ ಪರಿಣಾಮಕಾರಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಭೀಭತ್ಸ ಘಟನೆಗಳು ಶಾoತಿ ಪ್ರಿಯರ ಜಿಲ್ಲೆ ಉಡುಪಿಯಲ್ಲಿ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ರೂಪಿಸುವುದು ಸೂಕ್ತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.