ಮಣಿಪುರ ಹಿಂಸಾಚಾರ: ಕೇಂದ್ರ ಸರಕಾರ ಮಧ್ಯಪ್ರವೇಶಕ್ಕೆ ಉಡುಪಿ ಧರ್ಮಪ್ರಾಂತ್ಯದಿಂದ ಮನವಿ ಸಲ್ಲಿಕೆ
ಉಡುಪಿ: ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯದ ಪರವಾಗಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರ ಮತ್ತು ಜೀವ ಹಾನಿ, ಆಸ್ತಿಪಾಸ್ತಿಗಳ ನಷ್ಟದಿಂದ ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ.
ಬಹುಸಂಖ್ಯಾತ ಮಣಿಪುರಿಗಳು (ಮೈಟೈಸ್) ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಜನರು (ಒಟ್ಟಾರೆಯಾಗಿ ಕುಕಿ/ಜೋಮಿ ಬುಡಕಟ್ಟುಗಳು ಎಂದು ಕರೆಯುತ್ತಾರೆ) ನಡುವಿನ ಅಂತರ-ಸಮುದಾಯ ಸಂಘರ್ಷದ ನೆಪದಲ್ಲಿ ವಿಸ್ತೃತ ಇಂಫಾಲ್ ಕಣಿವೆಯಲ್ಲಿ ಬಹುತೇಕ ಎಲ್ಲಾ ಚರ್ಚ್ಗಳನ್ನು ಸುಟ್ಟುಹಾಕಲಾಗಿದೆ, ಧ್ವಂಸಗೊಳಿಸಲಾಗಿದೆ ಅಥವಾ ಅಪವಿತ್ರಗೊಳಿಸಲಾಗಿದೆ. ಕನಿಷ್ಠ 317 ಚರ್ಚ್ಗಳು ಮತ್ತು 70 ಚರ್ಚ್ ಆಡಳಿತ/ಶಾಲಾ ಕಟ್ಟಡಗಳನ್ನು ಸುಟ್ಟು ಹಾಕಲಾಗಿದೆ. ಕನಿಷ್ಠ 75 ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಇದೊಂದು ಭಾರತ ಕಂಡ ಅತ್ಯಂತ ಕೆಟ್ಟ ಕ್ರೈಸ್ತ ವಿರೋಧಿ ಹಿಂಸಾಚಾರವಾಗಿದ್ದು ಸುಮಾರು 30000 ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ.
ವಿವಿಧ ಗುಂಪುಗಳಿಂದ ಪ್ರಚೋದಿಸಲ್ಪಟ್ಟ ವಿಧ್ವಂಸಕ ಕೃತ್ಯವನ್ನು ಕ್ರೈಸ್ತ ಸಮುದಾಯ ಬಲವಾಗಿ ಖಂಡಿಸುತ್ತಿದ್ದು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಎಲ್ಲಾ ಮನೆಗಳು, ಚರ್ಚ್ಗಳು ಮತ್ತು ಹಾನಿಗೊಳಗಾದ ಆಸ್ತಿಗಳನ್ನು ಪುನರ್ನಿರ್ಮಿಸಬೇಕು ಮತ್ತು ಮನೆಗಳನ್ನು ಪುನರ್ನಿರ್ಮಿಸಲು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಸರ್ಕಾರವು ಈ ಪ್ರದೇಶದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ತ್ವರಿತವಾಗಿ ಮರುಸ್ಥಾಪಿಸಬೇಕು ಮತ್ತು ಸಂತ್ರಸ್ತ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅದರ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ಸಂಬಂಧಪಟ್ಟವರಿಗೆ ಮನವಿಯನ್ನು ತಲುಪಿಸಲಾಗುವುದು ಎಂದರು.ಮನವಿ ನೀಡಿದ ನೀಯೋಗದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಇದರ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ಭಾರತೀಯ ಕ್ರೈಸ್ತ ಒಕ್ಕೂಟ ಇದರ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw