ತೈಲ ಬೆಲೆ ಏರಿಕೆಯಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಸಚಿವ ಧರ್ಮೇಂದ್ರ ಪ್ರಧಾನ್ ಕಿಡಿ
ನವದೆಹಲಿ: ತೈಲ ಬೆಲೆ ಏರಿಕೆಯಾಗಲು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಈ ಸರ್ಕಾರದ ಮೇಲೆ ಲಕ್ಷಾಂತರ ಕೋಟಿಗಳಷ್ಟು ಸಾಲದ ಹೊರೆಯನ್ನು ಬಿಟ್ಟು ಹೋಗಿತ್ತು. ಇದನ್ನು ಬಡ್ಡಿ ಸಮೇತ ವಾಪಸ್ ನೀಡುವ ಜವಾಬ್ದಾರಿ ಈ ಸರ್ಕಾರದ ಮೇಲಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ತೈಲ ಬೆಲೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರ್ಥಶಾಸ್ತ್ರಜ್ಞರು ಇತ್ತೀಚೆಗಷ್ಟೆ ಒಂದು ಅಂಶವನ್ನು ಮುನ್ನೆಲೆಗೆ ತಂದಿದ್ದರು. 2014ಕ್ಕಿಂತಲೂ ಮುನ್ನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿಗಳಷ್ಟು ಸಾಲವನ್ನು ತೈಲ ಬಾಂಡ್ ಗಳ ಮೇಲೆ ಹೊಂದಿತ್ತು. ಈ ಕಾರಣಾದಿಂದಾಗಿ ಈಗಿನ ಸರ್ಕಾರ ಅದನ್ನು ಅಸಲು ಹಾಗೂ ಬಡ್ಡಿಯ ಸಮೇತ ಸಾಲ ಮರುಪಾವತಿ ಮಾಡಬೇಕಿದೆ, ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಇದೇ ಕಾರಣ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯೂ ದೇಶೀಯವಾಗಿ ತೈಲೋತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ಕಾರಣವಾಗಿದೆ. ದೇಶೀಯವಾಗಿ ಇರುವ ಬೇಡಿಕೆಗಳನ್ನು ಸರಿದೂಗಿಸಲು ಶೇ.80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ತೈಲದಿಂದ ಬರುತ್ತಿರುವ ತೆರಿಗೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಚಟುವಟಿಕೆಯಂತಹ ಅಭಿವೃದ್ಧಿ ಯೋಜನೆಗಳಿಗೆ ಬಳಸಿದೆ, ಇದರಲ್ಲಿ ಮುಚ್ಚಿಡುವಂಥಹದ್ದೇನು ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.