ಪೆಟ್ರೋಲ್ ದರ ಏರಿಕೆಯ ಈ ಅಚ್ಚೇ ದಿನಗಳು ತೊಲಗಲಿ: SDPI
ಚಾಮರಾಜನಗರ: ಇತ್ತೀಚೆಗೆ ಐದು ರಾಜ್ಯಗಳ ಚುನಾವಣೆ ನಡೆಯಿತು. ಅಲ್ಲಿಯವರೆಗೂ ಮೌನವಾಗಿದ್ದ ಕೇಂದ್ರ ಸರ್ಕಾರ ಮೇ 4 ರಿಂದ ಇಲ್ಲಿಯವರೆಗೆ ಸುಮಾರು 23 ಬಾರಿ ನಿರಂತರವಾಗಿ ಇಂಧನ ದರ ಏರಿಸಿ ಕೊಂಡು ಬಂದ ಪರಿಣಾಮ ಇವತ್ತು ಪೆಟ್ರೋಲ್ ದರ 100 ರೂ. ದಾಟಿದೆ. ಪೆಟ್ರೋಲ್ ದರ ಏರಿಕೆಯ ಈ ಅಚ್ಚೇ ದಿನಗಳು ನಮಗೆ ಬೇಡ. ಇದು ಅಚ್ಚೇ ದಿನಗಳು ಅಲ್ಲ, ಇದು ಕರಾಳ ದಿನಗಳು. ಈ ದಿನಗಳು ತೊಲಗಲೇ ಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ತೆರಿಗೆ ಸಂಗ್ರಹ ರೂಪದಲ್ಲಿ ಜನರಿಂದ ಬಲವಂತವಾಗಿ ಹಣ ದೋಚುತ್ತಿದ್ದಾರೆ. ಈ ದರ ಏರಿಕೆ ಎಂಬ ಮಹಾಮಾರಿಯನ್ನು ಸರ್ಕಾರ ತಕ್ಷಣ ಹತೋಟಿಗೆ ತರಬೇಕು. ಇಲ್ಲ ಎಂದರೆ ಜನ ಸಾಮಾನ್ಯರ ಜೀವನ ದುಸ್ಥಿತಿಗೆ ತಳ್ಳಲ್ಪಡುತ್ತದೆ ಎಂದು ಕಲೀಲ್ ಉಲ್ಲಾ ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಬ್ರಾರ್ ಆಹಮದ್ ರಾಜಸ್ಥಾನದ ನಗರಗಳಲ್ಲಿ ಇಂದು ಪೆಟ್ರೋಲ್ ಸರಿಸುಮಾರು 108 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಇದು ದೇಶದಲ್ಲೇ ಗರಿಷ್ಠ ದರವಾಗಿದೆ. ಪ್ರೀಮಿಯಂ ಅಥವಾ ಸಂಯೋಜಕ ಪೆಟ್ರೋಲ್ ಲೀಟರ್ ಗೆ 110.50 ಪೈಸೆ ಮತ್ತು ಡಿಸೇಲ್ 103.72 ಪೈಸೆ. ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ರಾಜಸ್ಥಾನ ಸರ್ಕಾರವು ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದೆ. ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ನೇತೃತ್ವದ ಈ ಎರಡು ಸರ್ಕಾರಗಳು ತೆರಿಗೆ ಸಂಗ್ರಹದ ನೆಪ್ಪದಲ್ಲಿ ಜನಸಾಮಾನ್ಯರನ್ನು ಲೂಟಿ ಮಾಡುವುದರಲ್ಲಿ ನಿಸ್ಸೀಮರು ಎಂದು ಅಬ್ರಾರ್ ಅಭಿಪ್ರಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಎಂ, ಜಿಲ್ಲಾ ಕಾರ್ಯದರ್ಶಿ ಜಬೀ ನೂರ್, ಜಿಲ್ಲಾ ಸಮಿತಿ ಸದಸ್ಯರಾದ ಕಿಜರ್, ಇಸ್ರಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.