ಮತ್ತೆ ಆರಂಭವಾಯ್ತು ‘ಪ್ಲಾಸ್ಟಿಕ್ ನಿಷೇಧ’ ಅನ್ನೋ ಪ್ರಹಸನ, ಅಧಿಕಾರಿಗಳ ಕಣ್ಕಟ್ಟು ಶೋ!
ಪ್ಲಾಸ್ಟಿಕ್ ನಿಂದ ನಮ್ಮ ಪರಿಸರಕ್ಕೆ ನಾನಾ ರೀತಿಯ ತೊಂದರೆಗಳಿವೆ ಎನ್ನುವುದು ತಿಳಿದಿದ್ದರೂ, ಈವರೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಯಾವುದೇ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಪ್ಲಾಸ್ಟಿಕ್ ನಿಷೇಧ ಎಂಬ ಪ್ರಹಸನಗಳು ನಡೆದು ಬಳಿಕ ಎಂದಿನಂತೆಯೇ ಪ್ಲಾಸ್ಟಿಕ್ ಬಳಕೆ ಮುಂದುವರಿಯುತ್ತಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧ ಅನ್ನೋ ಪ್ರಹಸನ ಆರಂಭವಾಗಿದ್ದು, ಅಧಿಕಾರಿಗಳು ಪೆನ್ನು ರಶೀದಿ ಹಿಡಿದುಕೊಂಡು, ಅಂಗಡಿ ಮುಂಗಟ್ಟುಗಳಿಗೆ ರೈಟ್ ಮಾಡಿ, ದಂಡ ವಿಧಿಸುತ್ತಿದ್ದಾರೆ.
ಪ್ಲಾಸ್ಟಿಕ್ ಬಳಕೆ ನಿಷೇಧದ ಕಾರ್ಯಾಚರಣೆ ಕಾಟಾಚಾರದ ಕಾರ್ಯಾಚರಣೆಯಾಗುತ್ತಿದ್ದು, ಇದರಿಂದ ಕೇವಲ ವ್ಯಾಪಾರಿಗಳಿಗಷ್ಟೆ ಬರೆ ಬೀಳುತ್ತಿದೆ. ವಾಸ್ತವವಾಗಿ, ಅಂಗಡಿಗಳಲ್ಲಿ ವ್ಯಾಪಾರಿಗಳು ಪ್ಲಾಸ್ಟಿಕ್ ಕವರ್ ನಲ್ಲಿ ವಸ್ತುಗಳನ್ನು ಗ್ರಾಹಕರಿಗೆ ಕಟ್ಟಿ ಕೊಡುವಂತಿಲ್ಲ ಎನ್ನುವಷ್ಟಕ್ಕೆ ಮಾತ್ರವೇ ಪ್ಲಾಸ್ಟಿಕ್ ನಿಷೇಧ ಪ್ರಹಸನ ಸೀಮಿತವಾಗುತ್ತಿದೆ ಎನ್ನುವ ಆಕ್ರೋಶಗಳು ಇದೀಗ ಕೇಳಿ ಬಂದಿವೆ.
ಇಂದು ಸಾಕಷ್ಟ ವಸ್ತುಗಳು, ಆಹಾರ ವಸ್ತುಗಳು ಸೇರಿದಂತೆ ದಿನಬಳಕೆ ವಸ್ತುಗಳು ಪ್ಲಾಸ್ಟಿಕ್ ಗಳಿಂದಲೇ ಕವರ್ ಆಗಿ ಅಂಗಡಿಗಳಿಗೆ ಮಾರಾಟವಾಗುತ್ತಿವೆ. ಸಾಂಬಾರ್ ಪದಾರ್ಥಗಳು, ಮಸಾಲೆ ಪದಾರ್ಥಗಳು, ಉಪ್ಪು, ಸಕ್ಕರೆ, ಐಸ್ ಕ್ರೀಂಗಳು, ಕ್ಯಾಂಡಿಗಳು, ಚಾಕೊಲೇಟ್ ಗಳು ಹೀಗೆ ಪಟ್ಟಿ ಮಾಡ್ತಾ ಹೋದರೆ, ಶೇ.80ಕ್ಕೂ ಅಧಿಕ ವಸ್ತುಗಳು ಪ್ಲಾಸ್ಟಿಕ್ ಕವರ್ ಗಳಲ್ಲೇ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುತ್ತವೆ. ಆದರೆ, ಅಂಗಡಿಯವನು ಈ ಎಲ್ಲ ಪ್ಲಾಸ್ಟಿಕ್ ಕವರ್ ಗಳ ವಸ್ತುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಗ್ರಾಹಕನಿಗೆ ಕೊಟ್ಟರೆ, ಆತನಿಗೆ ದಂಡ ವಿಧಿಸಲಾಗುತ್ತಿದೆ. ಇದನ್ನು ಪ್ರಹಸನ ಅನ್ನದೆ ಇನ್ನೇನು ಹೇಳಲು ಸಾಧ್ಯ ಎನ್ನುವಂತಾಗಿದೆ.
ದೊಡ್ಡ ದೊಡ್ಡ ಕಂಪೆನಿಗಳ ಪದಾರ್ಥಗಳು ರಾಜಾರೋಷವಾಗಿ ಬಣ್ಣ ಬಣ್ಣದ ಡಿಸೈನ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲೇ ಮಾರುಕಟ್ಟೆಗೆ ಬರುತ್ತಿವೆ. ಇದ್ಯಾವುದಕ್ಕೂ ಅಧಿಕಾರಿಗಳು ಕಡಿವಾಣ ಹಾಕಲು ಹೋಗದೇ, ದಿನಸಿ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ ಎಂದು ದಂಡ ವಿಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುವಂತಾಗಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕಾದರೆ, ಎಲ್ಲಾ ವಸ್ತುಗಳ ಮೇಲೆಯೂ ಅಧಿಕಾರಿಗಳು, ಸರ್ಕಾರಗಳು, ಜಿಲ್ಲಾಡಳಿತಗಳು ಕಡಿವಾಣ ಹಾಕಬೇಕು. ಕೇವಲ ಪ್ಲಾಸ್ಟಿಕ್ ಕವರ್ ಗಳಲ್ಲಿ ವಸ್ತುಗಳನ್ನು ಕಟ್ಟಿಕೊಡುವವರನ್ನು ಗುರಿಯಾಗಿಸಿ ದಂಡ ವಿಧಿಸುವ ಪ್ರಹಸನಗಳು, ಅಧಿಕಾರಿಗಳ ಕಣ್ಕಟ್ಟು ವಿದ್ಯೆಗಳನ್ನು ಇನ್ನಾದರೂ ನಿಲ್ಲಿಸಿ, ಪ್ಲಾಸ್ಟಿಕ್ ಮುಕ್ತ ರಾಜ್ಯಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರತಿಷ್ಠಿತ ಕಂಪೆನಿಗಳ ಪ್ಲಾಸ್ಟಿಕ್ ಕವರ್ ಗಳ ವಸ್ತುಗಳಿಗೂ ಕಡಿವಾಣ ಹಾಕಬೇಕಿದೆ ಎನ್ನುವುದೇ ಈ ವರದಿಯ ಆಶಯ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka