ಮೋದಿ ಕಾರ್ಯಕ್ರಮಕ್ಕೆ ಒತ್ತಾಯ ಪೂರ್ವಕವಾಗಿ ಜನರನ್ನು ಕರೆತರಲಾಗುತ್ತಿದೆ: ಮಾಜಿ ಶಾಸಕ ವಸಂತ ಬಂಗೇರ ಆರೋಪ
ಬೆಳ್ತಂಗಡಿ: ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ,ಜನರನ್ನು ಒತ್ತಾಯ ಪೂರ್ವಕವಾಗಿ ಸೆ. 2 ರಂದು ಮಂಗಳೂರಿಗೆ ಕರೆದುಕೊಂಡು ಹೋಗಲು ಕಾರ್ಯಾರಂಭವಾಗಿದೆ. ಇದು ದೇಶದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಸೆ.2ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು, ಈ ಬಗ್ಗೆ ಬೆಳ್ತಂಗಡಿ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾಡಳಿತವನ್ನು ದುರುಪಯೋಗಪಡಿಸಿ, ಉಚಿತ ಬಸ್ ಗಳ ಮೂಲಕ ಕೇಂದ್ರ ಸರ್ಕಾರದ ವಿವಿಧ ಫಲಾನುಭವಿಗಳನ್ನು, ವಿವಿಧ ಸಂಘ ಸಂಸ್ಥೆಗಳ ಜನರನ್ನು ಒತ್ತಾಯ ಪೂರ್ವಕವಾಗಿ, ಬಲಾತ್ಕಾರವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಇದು ಅತ್ಯಂತ ಖಂಡನೀಯ. ಜೊತೆಗೆ ಮೋದಿಯವರ ಜನಪ್ರಿಯತೆ ಕುಗ್ಗಿರುವುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದರು.
ಸೆಪ್ಟೆಂಬರ್ 2 ರಂದು ಎನ್‌ಎಂಪಿಟಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿ, ಬಳಿಕ ಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಪೂರ್ವತಯಾರಿಯಾಗಿ ನಡೆಯುತ್ತಿರುವ ಸಭೆಯಾಗಿದೆ. ಆದರ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವುದು ಅನುಮಾನವಾಗಿದೆ. ಸಂಸದ, ಶಾಸಕರುಗಳ ವಿರುದ್ಧದ ಅಸಮಾಧಾನದಿಂದ ಜನರು ಬರಲಾರರು ಎಂದು ಬಿಜೆಪಿ ಮುಖಂಡರುಗಳಿಗೆ ಗೊತ್ತಾಗಿದೆ. ಇದರಿಂದ ವಿಚಲಿತರಾದ ಬಿಜೆಪಿ ಪಕ್ಷ ಜಿಲ್ಲಾಡಳಿತದ ಮೂಲಕ ಸ್ತ್ರೀಶಕ್ತಿ ಹಾಗೂ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಸಭೆಗೆ ಕರೆತರಲು ಮುಂದಾಗಿದೆ. ಅದಕ್ಕಾಗಿ ಜಿಲ್ಲಾಡಳಿತವೇ ಉಚಿತ ಬಸ್ ಗಳನ್ನು ವ್ಯವಸ್ಥೆ ಮಾಡಿದೆ. ಕಡ್ಡಾಯವಾಗಿ ಫಲಾನುಭವಿಗಳನ್ನು ಕರೆದುಕೊಂಡು ಬರಲು ಎಲ್ಲಾ ಇಲಾಖೆಗಳಿಗೂ ಆದೇಶಿಸಲಾಗಿದೆ. ಇಷ್ಟು ಕಷ್ಟ ಪಟ್ಟು ಪ್ರಧಾನಿಯವರ ಸಭೆಗೆ ಜನ ಸೇರಿಸಬೇಕಾಗಿ ಬಂದಿರುವುದು ಬಿಜೆಪಿಯ ಈಗಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.
ದಿನಬಳಕೆಯ ವಸ್ತುಗಳ, ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಸೇರಿದಂತೆ ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದ ದೇಶದ ಜನತೆ ಆಕ್ರೋಶ ಭರಿತರಾಗಿದ್ದು, ನರೇಂದ್ರ ಮೋದಿಯವರ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಈ ಕಾರಣಕ್ಕಾಗಿ ಇದೀಗ ಫಲಾನುಭವಿಗಳನ್ನು ಸೇರಿಸಲು ಮುಂದಾಗಿದೆ. ಒಂದೆರಡು ಬಾರಿ ಜನರನ್ನು ಮೋಸ ಮಾಡಬಹುದು, ಆದರೆ ಯಾವಾಗಲೂ ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಇನ್ನಾದರು ಅರಿತುಕೊಂಡರೆ ಉತ್ತಮ ಎಂದರು.
ಧರ್ಮ, ದೇವರ, ಹಿಂದುತ್ವದ ಹೆಸರಿನಲ್ಲಿ ಮತ ಸೆಳೆಯುವ ಆಟ ಯಾವಾಗಲೂ ನಡೆಯುವುದಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ಮತ ಪಡೆಯಬಹುದು ಎಂದುಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಜ್ಞಾವಂತರಾದ ಯುವಕರು ಬಿಜೆಪಿ, ಸಂಘಪರಿವಾರದಿಂದ ಹೊರ ಬರುತ್ತಿದ್ದಾರೆ, ಇದರಿಂದಾಗಿ ಬಿಜೆಪಿ ನರೇಂದ್ರ ಮೋದಿಯವರ ಎದುರು ಶಕ್ತಿ ಪ್ರದರ್ಶನ ಮಾಡಲು ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಸೇರಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
ಸೆಪ್ಟೆಂಬರ್ 2 ರ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ನಮ್ಮ ಸ್ಪಷ್ಟ ವಿರೋಧವಿದೆ. ಒತ್ತಾಯ ಪೂರ್ವಕವಾಗಿ, ಬಲಾತ್ಕಾರವಾಗಿ ಜನರನ್ನು ಕರೆದುಕೊಂಡು ಹೋಗುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಜಿಲ್ಲಾಡಳಿತದ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು, ತಪ್ಪಿದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮಾತನಾಡಿ, 8 ವರ್ಷಗಳ ಹಿಂದೆ ಅಚ್ಚೇ ದಿನ್ ಹೇಳಿಕೆ ನೀಡಿ ಆಕಾಶ ತೋರಿಸಿದ್ದ ಮೋದಿ ಅವರ ಜನಪ್ರಿಯತೆ ಸಂಪೂರ್ಣ ಕುಗ್ಗಿದೆ. ಜನರಿಗೆ ಯಾವತ್ತೂ ಮೋಸ ಮಾಡಲು ಸಾಧ್ಯವಿಲ್ಲ. ಅವರು ಹೇಳಿದ ಅಚ್ಚೇ ದಿನ್, ಅದಾನಿ ಅವರು ಇಂದು ವಿಶ್ವದ ಮೂರನೇ ಅತೀ ಶ್ರೀಮಂತ ಎಂದ ಮಾಧ್ಯಮದಲ್ಲಿ ಬಹಿರಂಗವಾಗುತ್ತಿದ್ದು, ಮೋದಿ ಮತ್ತು ಅಮಿತ್ ಶಾ ಕಪ್ಪುಹಣ ಈಗ ಯಾರಲ್ಲಿದೆ ಎಂದು ಜಗಜ್ಜಾಹೀರಾಗಿದೆ ಎಂದರು.
ಸಿಪಿಐಎಂ ಪಕ್ಷದ ತಾಲೂಕು ಸಮಿತಿ ಸದಸ್ಯ ಶೇಖರ್ ಲಾಯಿಲ ಮಾತನಾಡಿ, ಪ್ರಧಾನಿಯವರು ಭಾಗವಹಿಸುತ್ತಿರುವ ಎನ್.ಎಂ.ಪಿ.ಟಿ ಯ ಕಾರ್ಯಕ್ರಮಕ್ಕೆ ಬರುತ್ತಿದ್ದು ಅದನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿಕೊಂಡಿದೆ. ಕೇಂದ್ರ ಸರಕಾರದ ಫಲಾನುಭವಿಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯುಷ್ಮಾನ್, ಸಂಜೀವಿನಿ, ಸ್ತ್ರೀ ಶಕ್ತಿ ಯೋಜನೆಯಂತಹಾ ಫಲಾನುಭವಿಗಳನ್ನು ಬಲಾತ್ಕಾರವಾಗಿ ಸಭೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿರುವುದು ಖಂಡನೀಯ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಸಾಲು ಸಾಲು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದನ್ನು ಸಮಾಧಾನಪಡಿಸಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka