ಬರ್ಥ್ ಡೇಗೆ ಹೋದವಳು ಸ್ನೇಹಿತನಿಂದಲೇ ಹತ್ಯೆಗೀಡಾದಳು | ಅತೀ ಬುದ್ಧಿವಂತಿಕೆ ತೋರಿಸಿ ಪೊಲೀಸರ ಅತಿಥಿಯಾದ ಕೊಲೆಗಾರ
ಭುವನೇಶ್ವರ: ಬರ್ತ್ ಡೇ ಪಾರ್ಟಿಗೆ ಹೋದ ಯುವತಿ ಮರಳಿ ಬರಲಿಲ್ಲ. ಆದರೆ ಆಕೆಯ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಯಿತು. ಈ ಪ್ರಕರಣಗಳ ಬೆನ್ನು ಹತ್ತಿ ಹೋದ ಪೊಲೀಸರಿಗೆ ಅಚ್ಚರಿಯ ತಿರುವುಗಳು ದೊರೆಯುತ್ತಲೇ ಹೋಗುತ್ತದೆ. ಕೊನೆಗೂ ಕೊಲೆಗಾರರನ್ನು ಯಶಸ್ವಿಯಾಗಿ ಪೊಲೀಸರು ಬಂಧಿಸುತ್ತಾರೆ.
ಇದು ಯಾವುದೋ ಸಿನಿಮಾದ ಕಥೆ ಅಲ್ಲ. ಒಡಿಶಾದ ಜಾಜ್ ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಿಜವಾದ ಘಟನೆ. ಜನವರಿ 27ರಂದು ಮುಲಪಲಾದ ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಈ ಮೃತದೇಹ ಜರಾಫುಲಾ ನಾಯಕ್ ಎಂಬ ಯುವತಿಯದ್ದಾಗಿದೆ ಎಂದು ಪೊಲೀಸರು ಗುರುತು ಪತ್ತೆ ಮಾಡಿದ್ದಾರೆ. ಈ ಯುವತಿ ಜರಾಫುಲಾ ಮಯೂರ್ ಬಂಜ್ ಜಿಲ್ಲೆಯ ನಿವಾಸಿಯಾಗಿದ್ದಾಳೆ. ಅಲ್ಲದೇ ಇಲ್ಲಿನ ಆರ್ ಡಿ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದಾಳೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಿದಾಗ ಮೃತದೇಹದ ಸಮೀಪದಲ್ಲಿ ಒಂದು ಬ್ಯಾಗ್ ಪತ್ತೆಯಾಗಿತ್ತು. ಇದೊಂದು ಆಧಾರ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗಿತ್ತು. ಇದಲ್ಲದೇ ಮೃತ ಯುವವತಿಯ ತಂದೆ ಸ್ಥಳೀಯ ಯುವಕ ರಾಜೇಶ್ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು ಕೂಡ.
ಜನವರಿ 24ರಂದು ತನ್ನ ಟೀಚರ್ ಚಕ್ರಧರ್ ಅವರ ಮಗಳ ಬರ್ಥ್ ಡೇ ಕಾರ್ಯಕ್ರಮಕ್ಕೆ ಸಂತ್ರಸ್ತ ಯುವತಿ ಹೋಗಿದ್ದಳು. 25ರಂದು ಕಾರ್ಯಕ್ರಮ ಮುಗಿಸಿ 26ರಂದು ಬೆಳಗ್ಗೆ 11 ಗಂಟೆಗೆ ಯುವತಿಯನ್ನು ಚಕ್ರಧರ್ ಅವರು ಜಯದೇವ್ ವಿವಾರ್ ಸ್ಕ್ವೇರ್ ಗೆ ಡ್ರಾಪ್ ಮಾಡಿದ್ದರು. ಆ ಬಳಿಕ 3 ಗಂಟೆಯ ಸುಮಾರಿಗೆ ಯುವತಿಯು ತನಗೆ ಹೊಟ್ಟೆ ನೋವು ಇದೆ. ಹಾಗಾಗಿ ತಾನು ನಾಳೆ ಬರುವುದಾಗಿ ಮನೆಗೆ ಕರೆ ಮಾಡಿ ಹೇಳಿದ್ದಾಳೆ. ಅದು ಆಕೆಯ ಕೊನೆಯ ಕರೆಯಾಗಿತ್ತು. ಆ ಬಳಿಕ ಯುವತಿಯಿಂದ ಯಾವುದೇ ಕರೆಗಳು ಬಂದಿರಲಿಲ್ಲ.
ಯುವತಿಯ ಪೋಷಕರಾಗಿರುವ ರಮಾಕಾಂತ್ ಅವರು, ತನ್ನ ಮಗಳನ್ನು ಪೈಪ್ ಲೈನ್ ಕೆಲಸ ಮಾಡುತ್ತಿದ್ದ ರಾಕೇಶ್ ಎಂಬಾತ ಲವ್ ಮಾಡುತ್ತಿದ್ದ. ಇಬ್ಬರು ಕೂಡ ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡಿಕೊಂಡು ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ.
ಹಲವು ಕೋನಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಯುವತಿಯ ಮೃತದೇಹವನ್ನು ಹೇಗೆ ತರಲಾಗಿದೆ ಎಂದು ಪತ್ತೆ ಹಚ್ಚಬೇಕು ಎಂದು ತೀರ್ಮಾನಿಸಿದ್ದಾರೆ. ಅಂತೆಯೇ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಂತೆಯೇ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಆರೋಪಿ ರಾಕೇಶ್ ಹಾಗೂ ಆತನ ಸ್ನೇಹಿತ ಯುವತಿಯ ಮೃತದೇಹವನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇದಲ್ಲದೇ ಇಲ್ಲಿ ನ ಇಬ್ಬರು ಯುವಕರು, ಆರೋಪಿಗಳು ಸ್ಕೂಟರ್ ನಲ್ಲಿ ಹೋಗುತ್ತಿರುವುದನ್ನು ನೋಡಿದ್ದಾರೆ. ಹೀಗಾಗಿ ಪೊಲೀಸರಿಗೆ ಹಂತಕರ ಪತ್ತೆಗೆ ದೊಡ್ಡದಾದ ಆಧಾರ ದೊರೆತಿದೆ. ತಕ್ಷಣವೇ ಆರೋಪಿ ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಈತ ಆರೋಪಿ ರಾಕೇಶ್ ನ ಸ್ನೇಹಿತ ಎಂದು ಹೇಳಲಾಗಿದೆ.
ಈ ಪ್ರಕರಣದ ಆರೋಪಿಗಳ ಬಂಧಿಸಲಾಗಿದ್ದರೂ, ಯುವತಿಯನ್ನು ಯಾಕೆ ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಬಂಧಿತ ಆರೋಪಿಯನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆಯಿಂದ ಸತ್ಯ ತಿಳಿದು ಬರಬೇಕಿದೆ.