ನೈತಿಕ ಪೊಲೀಸ್ ಗಿರಿ: ಮುಸ್ಲಿಮ್ ಯುವತಿಯ ದೂರಿನನ್ವಯ ಇಬ್ಬರು ಆರೋಪಿಗಳು ಅರೆಸ್ಟ್: ಓರ್ವ ಪರಾರಿ
ಚಿಕ್ಕಬಳ್ಳಾಪುರ: ಹಿಂದೂ ಯುವಕನ ಜೊತೆಗೆ ಹೊಟೇಲ್ ಗೆ ಹೋಗಿದ್ದಕ್ಕೆ ಮುಸ್ಲಿಮ್ ಯುವಕರ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಈ ಸಂಬಂಧ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ನೂತನ ಸಿಎಂ ಸಿದ್ದರಾಮಯ್ಯ ಆರಂಭದಲ್ಲೇ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಗೋಪಿಕಾ ಚಾಟ್ಸ್ ಬಳಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಮ್ ಯುವತಿ ಹೊಟೇಲ್ ಗೆ ಹೋಗಿದ್ದರು. ಈ ವೇಳೆ ಮುಸ್ಲಿಮ್ ಯುವಕರ ತಂಡ ನೈತಿಕ ಪೊಲೀಸ್ ಗಿರಿ ನಡೆಸಿತ್ತು ಎನ್ನಲಾಗಿದೆ. ಯುವತಿ ನೀಡಿದ ದೂರಿನನ್ವಯ ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್(20) ಹಾಗೂ ಸದ್ದಾಂ(21) ಎಂಬವರನ್ನು ಬಂಧಿಸಲಾಗಿದ್ದು, ಇಮ್ರಾನ್ ಎಂಬಾತ ಪರಾರಿಯಾಗಿದ್ದಾನೆ.
ಯುವಕ ಮತ್ತು ಯುವತಿ ಹೊಟೇಲ್ ನಲ್ಲಿ ಟೇಬಲ್ ನಲ್ಲಿ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ಯುವಕರ ತಂಡ ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಇವರು ಹೊಟೇಲ್ ನಿಂದ ಹೊರ ಬರುತ್ತಿದ್ದಂತೆಯೇ ಹಲ್ಲೆಗೆ ಮುಂದಾಗಿದ್ದಾರೆ. ದುಷ್ಕರ್ಮಿಗಳ ಕೃತ್ಯದ ವಿರುದ್ಧ ಯುವತಿ ಪ್ರತಿರೋಧ ಒಡ್ಡಿದಾಗ, ಮುಸ್ಲಿಮ್ ಧರ್ಮದಲ್ಲಿ ಹುಟ್ಟಿ, ಹಿಂದೂ ಯುವಕನ ಜೊತೆಗೆ ಹೋಗುತ್ತೀಯಾ? ಎಂದು ಯುವತಿಯನ್ನು ಅವಮಾನಿಸಿದ್ದಾರೆ. ಅಲ್ಲದೇ ಹಿಂದೂ ಯುವಕನನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮುಸ್ಲಿಮ್ ಯುವಕರು ನಡೆಸಿದ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೈತಿಕ ಪೊಲೀಸ್ ಗಿರಿ ರಾಜ್ಯಕ್ಕೆ ಕಳಂಕ:
ನೈತಿಕ ಪೊಲೀಸ್ ಗಿರಿ ರಾಜ್ಯಕ್ಕೆ ಕಳಂಕವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಒಂದು ಸವಾಲಾಗಿ ಪರಿಣಮಿಸಿದೆ. ಬೀದಿ ರೌಡಿಗಳೆಲ್ಲ ತಮ್ಮದೇ ಕಾನೂನು ಮಾಡುವುದೇ ಆದರೆ, ಪೊಲೀಸ್ ವ್ಯವಸ್ಥೆಗಳು ಯಾಕೆ ಅನ್ನೋ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಯಾರೇ ನೈತಿಕ ಪೊಲೀಸ್ ಗಿರಿ ನಡೆಸಲಿ, ಸರ್ಕಾರ ಅಂತಹವರನ್ನು ಮಟ್ಟ ಹಾಕಲಿ ಅನ್ನೋ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw