ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪೊಲೀಸರ ಎದುರೇ ಆತ್ಮಹತ್ಯೆಗೆ ಶರಣು! - Mahanayaka

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪೊಲೀಸರ ಎದುರೇ ಆತ್ಮಹತ್ಯೆಗೆ ಶರಣು!

27/02/2021

ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯೋರ್ವ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಹನುಮಂತನಗರ ಪೊಲೀಸರ ವಶದಲ್ಲಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

13.28 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ  60 ವರ್ಷ ವಯಸ್ಸಿನ  ಆರೋಪಿ ಸಿದ್ದಲಿಂಗಸ್ವಾಮಿ ಎಂಬವರನ್ನು ಬಂಧಿಸಲಾಗಿತ್ತು. ಆರೋಪಿಯು ತನ್ನನ್ನು ಬಿಡಿಎ ನೌಕರ ಎಂದು ಪರಿಚಯಿಸಿಕೊಂಡು ವಂಚನೆ ನಡೆಸುತ್ತಿದ್ದು,  ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಸೈಟ್ ಕೊಡಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ 13.28 ಲಕ್ಷ ರೂ. ಪಡೆದು ವಂಚಿಸಿರುವುದೇ ಅಲ್ಲದೇ ಬಿಡಿಎ ನಕಲಿ ಸೀಲ್, ಲೆಟರ್ ಹೆಡ್ ಬಳಸಿ ವಂಚಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಲಿಂಗಸ್ವಾಮಿಯನ್ನು ಬಂಧಿಸಲಾಗಿತ್ತು.

ಈತನ ಕೃತ್ಯ ಬಯಲಾಗುತ್ತಿದ್ದಂತೆಯೇ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ದೂರು ದಾಖಲಾಗಿತ್ತು. ದೂರಿನನ್ವಯ ಆರೋಪಿಯನ್ನು ಬಂಧಿಸಿದ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದರು.

ವಿಚಾರಣೆಯ ವೇಳೆ ಆರೋಪಿ ಸಿದ್ದಲಿಂಗಸ್ವಾಮಿ ವಿದ್ಯಾರಣ್ಯಪುರದಲ್ಲಿರುವ ತನ್ನ ಮನೆಯಲ್ಲಿ ಕೆಲವು ವಸ್ತುಗಳನ್ನು ತಾನು ಇಟ್ಟಿರುವುದಾಗಿ ಹೇಳಿದ್ದ. ಹೀಗಾಗಿ ಮಹಜರಿಗಾಗಿ ಪೊಲೀಸರು ಇವರನ್ನು  ಕರೆತಂದಿದ್ದರು.

ತನ್ನ ಪತ್ನಿ ಮತ್ತು ಮಗಳ ಜೊತೆ ವಿದ್ಯಾರಣ್ಯಪುರ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆ ಫ್ಲ್ಯಾಟ್ ಪಡೆದಿದ್ದ ಆರೋಪಿ, ಪೊಲೀಸರ ಜೊತೆಗೆ ಫ್ಲ್ಯಾಟ್ ಗೆ ಬಂದ ತನ್ನ ಮನೆಯ ಕಿಚನ್ ಮೂಲಕ ಹೊರಹೋಗಿ ಕಟ್ಟಡದಿಂದ ಕೆಳಗೆ ಹಾರಿದ್ದಾರೆ.

ಕಟ್ಟಡದಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆರೋಪಿ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ