ಕುಟುಂಬಕ್ಕಾಗಿ ರಾಜಕಾರಣ, ಜೆಡಿಎಸ್ ಕಣ್ಣೀರ ರಾಜಕಾರಣ ಮಂಡ್ಯದಲ್ಲಿ ನಡೆಯದು ಎಂದು ತೋರಿಸಿಕೊಡಿ: ಸಿ.ಟಿ.ರವಿ
ಮಂಡ್ಯ: ಟಿಪ್ಪು ಜಪ ಮಾಡುವವರಿಗೆ ರಾಜಕೀಯವಾಗಿ ಬುದ್ಧಿ ಕಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಲಹೆ ನೀಡಿದರು.
ಮಂಡ್ಯದ ಮೈ ಶುಗರ್ ಕಾರ್ಖಾನೆ ಮೈದಾನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯ ಎಂದರೆ ಕನ್ನಡ. ಟಿಪ್ಪು ಆಡಳಿತ ಭಾಷೆಯನ್ನು ಪಾರ್ಸಿಯನ್ನು ಜಾರಿಗೆ ತಂದಿದ್ದ. ಅದು ನಮ್ಮ ಅಪ್ಪನ, ತಾತನ ಭಾಷೆಯಲ್ಲ. ತಲೆ ಕೆಟ್ಟವರೂ ಕೂಡ ಪಾರ್ಸಿ ಭಾಷೆಯನ್ನು ಆಡಳಿತ ಭಾಷೆ ಮಾಡಿದ ಟಿಪ್ಪು ಮತ್ತು ಅವನಪ್ಪನನ್ನು ಕನ್ನಡ ಪ್ರೇಮಿ ಎನ್ನಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಂಡ್ಯ ಜನರಿಗಾಗಿ ರಾಜಕಾರಣ ಮಾಡಲು ಪರಿವರ್ತನೆ ಅನಿವಾರ್ಯ. ಕುಟುಂಬಕ್ಕಾಗಿ ರಾಜಕಾರಣ ಮಾಡುವುದಲ್ಲ ಎಂದು ತಿಳಿಸಿದ ಅವರು, ನಾನು ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ನೀರು ಕೊಟ್ಟ, ಸಕ್ಕರೆ ಕಾರ್ಖಾನೆ, ಮೈಸೂರು ಬ್ಯಾಂಕ್, ಉಕ್ಕಿನ ಕಾರ್ಖಾನೆ ಸ್ಥಾಪಿಸಿದವರು ಎಂದು ಅವರನ್ನು ನೆನಪಿಸುತ್ತೇವೆ. ಆದರೆ, ಕೆಲವರು ಟಿಪ್ಪು, ಟಿಪ್ಪು ಎನ್ನುತ್ತಾರೆ. ಮಂಡ್ಯಕ್ಕೆ ಟಿಪ್ಪುವಿನ ಕೊಡುಗೆ ಏನೆಂದು ಅವರನ್ನು ಪ್ರಶ್ನಿಸಿ ಎಂದು ಕಿವಿಮಾತು ಹೇಳಿದರು.
ಆಂಜನೇಯ ಸ್ವಾಮಿ ದೇವಾಲಯವನ್ನು ಮಸೀದಿ ಮಾಡಿದ್ದು ಅವರ ಕೊಡುಗೆಯೇ? ಎಂದು ಕೇಳಿದ ಅವರು, ಟಿಪ್ಪು ಸ್ಮರಣೆ ಮಾಡುವ ಸಿದ್ದರಾಮಯ್ಯರಿಗೆ ರಾಜಕೀಯವಾಗಿ ಬುದ್ಧಿ ಕಲಿಸಬೇಕಿದೆ ಎಂದು ತಿಳಿಸಿದರು.
ಕೆಲವರು ಕಣ್ಣೀರು ಹಾಕುತ್ತಾರೆ. ಮಂಡ್ಯದ ಮಕ್ಕಳಿಗಾಗಿ, ಮಂಡ್ಯದ ಬಡವರಿಗಾಗಿ ಆ ಕಣ್ಣೀರಲ್ಲ. ತನ್ನ ಮಗನನ್ನು ಕರೆದು ಕಣ್ಣೀರು ಹಾಕುತ್ತಾರೆ. ಮಂಡ್ಯದ ಜನ ಸ್ವಾಭಿಮಾನದ ಜನ ಎಂದು ಉತ್ತರ ಕೊಟ್ಟಿದ್ದೀರಿ. ಮಂಡ್ಯದ ಜನ ಪಂಚೆ ಉಟ್ಟುಕೊಂಡವರು; ಆದರೂ ತಾಕತ್ತು ತೋರಿಸುವಲ್ಲಿ ಹಿಂದೆ ಉಳಿದಿಲ್ಲ ಎಂದು ಮೆಚ್ಚುಗೆ ಸೂಚಿಸಿದರು.
ಇಡೀ ಮಂಡ್ಯದ ಏಳೂ ಕ್ಷೇತ್ರಗಳಲ್ಲಿ ಪರಿವರ್ತನೆ ಆಗಲಿದೆ. ಕಮಲ ಚಿಹ್ನೆಯ ಬಿಜೆಪಿ ಗೆದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂದು ಬರೆದಿದೆ. ಕುಟುಂಬದಿಂದ ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಬರೆದಿದೆಯಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕುಟುಂಬದಿಂದ, ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೋಸ್ಕರ ಎಂದು ಸಂವಿಧಾನವನ್ನು ಅರ್ಥ ಮಾಡಿಕೊಂಡಿವೆ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಿಸಿದ ಬಿಜೆಪಿಯಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ ಎಂದ ಅವರು, ಕಾಂಗ್ರೆಸ್‍ನವರು ಕೇವಲ ಕೊಲೆ ಮಾಡಿದ ಹಿಂದೂಗಳನ್ನಷ್ಟೇ ಯಾಕೆ ನೆನಪಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಗಲಭೆ ಮಾಡುವವರು, ಕುಕ್ಕರ್ ಬಾಂಬ್ ಇಟ್ಟವರನ್ನಷ್ಟೇ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಗಮನಕ್ಕೆ ತಂದರು. ಕುಟುಂಬ ರಾಜಕಾರಣ, ಜೆಡಿಎಸ್ ಕಣ್ಣೀರ ರಾಜಕಾರಣ ಮಂಡ್ಯದಲ್ಲಿ ನಡೆಯದು ಎಂದು ತೋರಿಸಿಕೊಡಿ ಎಂದು ತಿಳಿಸಿದರು.
ನಾವು ಸಮಾಜಕ್ಕಾಗಿ, ಬಡವರ ಕಷ್ಟಕ್ಕೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಮಗ, ಮೊಮ್ಮಗ, ಮರಿಮಗನಿಗಾಗಿ ಕಣ್ಣೀರು ಹಾಕುವವರನ್ನು ರಾಜಕಾರಣದಿಂದ ದೂರವಿಡಿ ಎಂದು ಸಲಹೆ ನೀಡಿದರು. ಮತಕ್ಕಾಗಿ ನಾವು ರಾಜಕಾರಣ ಮಾಡುವುದಿಲ್ಲ ಎಂಬುದನ್ನು ಹೈನುಗಾರಿಕಾ ಸಹಾಯಧನದ ಮೂಲಕ ತೋರಿಸಿದ್ದೇವೆ ಎಂದು ವಿವರಿಸಿದರು. ಕೇಂದ್ರ- ರಾಜ್ಯದ ಸಾಧನೆಗಳನ್ನು ವಿವರಿಸಿದ ಅವರು ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು.
ಕಾಂಗ್ರೆಸ್ಸಿನ ಓಲೈಕೆ ರಾಜಕಾರಣವಿದ್ದರೆ, ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ರಾಜಕಾರಣ ಎಂದು ತಿಳಿಸಿದರು. ನಮ್ಮದು ಹಿಂದುತ್ವದ ರಾಜಕಾರಣ ಎಂದು ಚಪ್ಪಾಳೆಯ ನಡುವೆ ತಿಳಿಸಿದರು. ಜೆಡಿಎಸ್‍ಗೆ ಮತ ಎಂದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂದು ಎಚ್ಚರಿಸಿದರು.
ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಕೇಂದ್ರ ಸರಕಾರ, ಯಡಿಯೂರಪ್ಪ- ಬೊಮ್ಮಾಯಿಯವರ ಸರಕಾರಗಳು ರಾಜ್ಯದಲ್ಲಿ ಹಿಂದೆಂದೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿವೆ. 70 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಮಾಡಿದ ಹೈವೇಗಳ ದುಪ್ಪಟ್ಟು ಹೈವೇ ಅಭಿವೃದ್ಧಿಯನ್ನು ನಮ್ಮ ಡಬಲ್ ಎಂಜಿನ್ ಸರಕಾರಗಳು ಮಾಡಿವೆ. ರೈಲ್ವೆ ವಿದ್ಯುದೀಕರಣ, ರೈಲ್ವೆ ಹಳಿ ದ್ವಿಪಥವಾಗಿ ಪರಿವರ್ತನೆಯಲ್ಲೂ ಕಾಂಗ್ರೆಸ್ ಸಾಧನೆಗಿಂತ ಹೆಚ್ಚಿನ ಸಾಧನೆ ನಮ್ಮ ಸರಕಾರದ್ದು ಎಂದು ವಿವರಿಸಿದರು.
ಬಡವರ ಹೆಸರಿನಲ್ಲಿ, ಜಾತಿಗಳನ್ನು ಒಡೆದು ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷವು 70 ವರ್ಷಗಳಲ್ಲಿ ತೆರೆದಿದ್ದ ಮೆಡಿಕಲ್ ಕಾಲೇಜಿಗಿಂತ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಮೋದಿಜಿ ಸರಕಾರವು ಕೇವಲ 7 ವರ್ಷಗಳ ಕಾಲದಲ್ಲಿ ಆರಂಭಿಸಿದೆ. ವಂದೇ ಭಾರತ್ ಹೈಸ್ಪೀಡ್ ಟ್ರೈನನ್ನು ಇದೇ ಭಾಗದಿಂದ ಮೊದಲು ಆರಂಭಿಸಲಾಗಿದೆ. ದಶಪಥ ರಸ್ತೆ ಕೂಡ ನಮ್ಮದೇ ಕೊಡುಗೆ. ಇದನ್ನು ಜನರಿಗೆ ತಿಳಿಸಿ ಎಂದು ವಿನಂತಿಸಿದರು.
ಇಲ್ಲಿಗೆ ಕೈಗಾರಿಕೆಗಳನ್ನು ಇಲ್ಲಿನ ಜನಪ್ರತಿನಿಧಿಗಳು ತರಲಿಲ್ಲ. ಆದರೆ, ಬಿಜೆಪಿ ಇಲ್ಲಿ ಸಕ್ಕರೆ ಕಾರ್ಖಾನೆ ಮತ್ತೆ ತೆರೆದಿದೆ. ಹಳ್ಳಿಯಲ್ಲೇ ಉತ್ತಮ ಉದ್ಯೋಗ ಸಿಗಲು ಬಿಜೆಪಿಯನ್ನು ಮತ್ತೆ ಆಡಳಿತಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ನರೇಂದ್ರ ಮೋದಿಜಿ ಅವರ ಜನಪರ ಕಾರ್ಯಕ್ರಮಗಳು, ಸಾಧನೆ, ರಾಜ್ಯದ ಬಿಜೆಪಿ ಸರಕಾರದ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ಜನರ ಮನೆ, ಮನಕ್ಕೆ ತಲುಪಿಸಿ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಇಂಥ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಯುವ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿನದು ಎಂದ ಅವರು, ಕಾಂಗ್ರೆಸ್ ಪಕ್ಷವು ಎಸಿಬಿ ರಚಿಸಿ ಭ್ರಷ್ಟಾಚಾರಕ್ಕೆ ಮುಂದಾಗಿತ್ತು. ಕಾಂಗ್ರೆಸ್‍ನ ಸುಳ್ಳುಗಳನ್ನು ಪ್ರಜ್ಞಾವಂತ ಮತದಾರರು ನಂಬದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಮಂಡ್ಯದಲ್ಲಿ ಕಾಂಗ್ರೆಸ್- ಜೆಡಿಎಸ್‍ಗೆ ಪಾಠ ಕಲಿಸಿ ಎಂದು ತಿಳಿಸಿದರು.
ರಾಜ್ಯದ ಸಚಿವ ಕೆ.ಸಿ. ನಾರಾಯಣಗೌಡ, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‍ಪಾಲ್ ಎ ಸುವರ್ಣ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಸಂದೀಪ್, ಪಕ್ಷದ ಪದಾಧಿಕಾರಿಗಳು, ಯುವ ಮೋರ್ಚಾ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw