ಹಾವೇರಿ ಜಿಲ್ಲೆಯಲ್ಲಿ ಬಿಸಿಯೂಟ ಸ್ಥಗಿತ: ಕಾರಣ ಏನು ಗೊತ್ತಾ?
![bisi utta](https://www.mahanayaka.in/wp-content/uploads/2023/08/bisi-utta.jpg)
19/08/2023
ಹಾವೇರಿ: ರೇಷನ್ ಕೊರತೆಯಿಂದಾಗಿ ಹಾವೇರಿ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಂಡು ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಅಡುಗೆ ಎಣ್ಣೆ, ಬೇಳೆ ಪೂರೈಕೆಗೆ ಎರಡು ತಿಂಗಳಿಗೊಮ್ಮೆ ಹೊಸ ಟೆಂಡರ್ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ವ್ಯತ್ಯಯವಾಗಿದೆ ಎನ್ನಲಾಗಿದೆ.
ಈಗಾಗಲೇ ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರುವಂತೆ ಶಿಕ್ಷಕರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವೆಡೆ ಶಿಕ್ಷಕರೇ ಅಂಗಡಿಯಿಂದ ರೇಷನ್ ಖರೀದಿಸುತ್ತಿರುವ ದುರ್ಗತಿ ಸೃಷ್ಟಿಯಾಗಿದೆ.
ಜಿಲ್ಲೆಗೆ ಸರ್ಕಾರದಿಂದ ಬರಬೇಕಿದ್ದ ರೇಷನ್ ಬಂದಿದೆ. ಆದ್ರೆ ತಾಲೂಕು ಮಟ್ಟದಲ್ಲಿ ಸರಿಯಾದ ಪೂರೈಕೆ ಆಗ್ತಿಲ್ಲ, ಈ ವಿಳಂಬಕ್ಕೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.