ಪ್ರಧಾನಿಯೇ ವಿಫಲವಾಗಿರೋವಾಗ, ಹೊಸ ಸಚಿವರಿಂದ ಏನು ಮಾಡಲು ಸಾಧ್ಯ? | ಸತೀಶ್ ಜಾರಕಿಹೊಳಿ ಪ್ರಶ್ನೆ - Mahanayaka
1:15 PM Sunday 14 - September 2025

ಪ್ರಧಾನಿಯೇ ವಿಫಲವಾಗಿರೋವಾಗ, ಹೊಸ ಸಚಿವರಿಂದ ಏನು ಮಾಡಲು ಸಾಧ್ಯ? | ಸತೀಶ್ ಜಾರಕಿಹೊಳಿ ಪ್ರಶ್ನೆ

sathish jarakiholi
08/07/2021

ಬೆಳಗಾವಿ: ಜನ ಪರ ಆಡಳಿತ ನೀಡಲು ಪ್ರಧಾನಿ ಮೋದಿಯೇ ವಿಫಲವಾಗಿರುವಾಗ ಹೊಸ ಸಚಿವರು ಏನು ಮಾಡಿಯರು? ಸೇನಾಧಿಪತಿಯಲ್ಲಿಯೇ ಇಚ್ಛಾಶಕ್ತಿ ಇಲ್ಲದಿರುವಾಗ ಸೈನಿಕರೇನು ಮಾಡಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.


Provided by

ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ಕೇಂದ್ರ ಸರ್ಕಾರ ಗಂಟೆಗೆ 50 ಕಿ.ಮೀ. ವೇಗದಲ್ಲಿ ಓಡುತ್ತಿತ್ತು. ಇದೀಗ ಹೊಸಬರನ್ನು ಸೇರಿಸಿಕೊಂಡಿರುವುದರಿಂದ ಮುಂದೆ ಗಂಟೆಗೆ 30 ಕಿ.ಮೀ. ವೇಗದಲ್ಲಿ ಓಡಲಿದೆ. ಮೀರಜ್ ನಿಂದ ಪಂಢರಪುರಕ್ಕೆ ಮೆರವಣಿಗೆ ಹೋದಂತೆ ನಿಧಾನವಾಗಿ ಹೋಗಲಿದೆ ಎಂದು ಅವರು ಟೀಕಿಸಿದರು.

ಹೊಸದಾಗಿ ರಾಜ್ಯದಿಂದ ನಾಲ್ವರು  ಸಚಿವರಾದರೂ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕದಲ್ಲಿ ಇನ್ನೂ 10 ಮಂದಿಯನ್ನು ಸಚಿವರನ್ನಾಗಿ ಮಾಡಿದರೂ ಪ್ರಯೋಜನವಿಲ್ಲ. ಪ್ರಧಾನಿಗೆ ಕೆಲಸ ಮಾಡುವ ಇಚ್ಛಾಶಕ್ತಿಯೇ ಇಲ್ಲ.  ಸೇನಾಧಿಪತಿಯಲ್ಲಿಯೇ ಇಚ್ಛಾಶಕ್ತಿ ಇಲ್ಲದಿರುವಾಗ ಸೈನಿಕರೇನು ಮಾಡಲು ಸಾಧ್ಯ? ಪ್ರಧಾನಿಯನ್ನು ಭೇಟಿಯಾಗಲು ಮಂತ್ರಿಗಳಿಗೇ ಸಾಧ್ಯವಾಗುತ್ತಿಲ್ಲ. ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಸಂಪುಟ ಪುನರ್ ರಚಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಕೊವಿಡ್ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ.  ಕೋರ್ಟ್ ಆದೇಶ ಮಾಡಿದ್ದರಿಂದಾಗಿ ಮಾತ್ರವೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಮ್ಲಜನಕ ನೀಡಿದೆ. ಇದೀಗ ಕೊವಿಡ್ ಲಸಿಕೆಗಾಗಿ ಜನರು ಪರದಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಲಸಿಕೆ ಅಭಿಯಾನ ನಡೆದರೆ, ಇನ್ನು 2 ವರ್ಷವಾದರೂ ಲಸಿಕೆ ಪೂರೈಕೆ ಪೂರ್ಣವಾಗುವುದಿಲ್ಲ ಎಂದು ಅವರು ಟೀಕಿಸಿದರು.

ಇತ್ತೀಚಿನ ಸುದ್ದಿ