ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ | ನಾ ದಿವಾಕರ - Mahanayaka
6:01 PM Friday 20 - September 2024

ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ | ನಾ ದಿವಾಕರ

na divakara
29/07/2021

ತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ ಬದುಕನ್ನು ಹಸನುಗೊಳಿಸುವ ಆಡಳಿತ ನೀತಿಗಳನ್ನು ಪಾಲಿಸಿ, ಸಂವಿಧಾನ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸುವ ಪ್ರಭುತ್ವ ತನ್ನ ಸಾರ್ವಭೌಮ ಪ್ರಜೆಗಳನ್ನು ಅನುಮಾನಿಸುವುದಿಲ್ಲ. ಪ್ರಜೆಗಳಿಂದ ಪ್ರಾಮಾಣಿಕತೆ ಮತ್ತು ಸನ್ನಡತೆಯನ್ನು ಅಪೇಕ್ಷಿಸುವ ಒಂದು ಪ್ರಭುತ್ವಕ್ಕೆ ಸಂವಿಧಾನವೇ ನಿಲುವುಗನ್ನಡಿಯಂತೆ. ತನ್ನ ಪ್ರತಿಯೊಂದು ಹೆಜ್ಜೆಯೂ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಗುಣಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬ ಪರಿವೆ , ಪರಿಜ್ಞಾನ ಇರುವ ಸರ್ಕಾರ ಮೊದಲು ಆತ್ಮವಿಮರ್ಶೆಗೆ ಮುಂದಾಗುತ್ತದೆ.

ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರಗಳ ಪ್ರತಿಯೊಂದು ಹೆಜ್ಜೆಯೂ ಸಾರ್ವಭೌಮ ಪ್ರಜೆಗಳ ಕಣ್ಗಾವಲಿಗೆ ಒಳಗಾಗಿರಬೇಕು. ಭಾರತ ಒಂದು ಸಾರ್ವಭೌಮ ಗಣತಂತ್ರ ಎಂದು ಘೋಷಿಸಿದ್ದರೆ, ಅದರ ಹಿಂದೆ ಈ ಉದಾತ್ತ ತತ್ವವೂ ಅಡಗಿದೆ. ಇಲ್ಲಿ ಪ್ರಜೆಯೇ ಪ್ರಭು. ಪ್ರಭುತ್ವದ ಆಡಳಿತ ನೀತಿಗಳನ್ನು ನಿರ್ವಹಿಸುವ ಪ್ರತಿನಿಧಿಗಳು ನಿಷ್ಠೆಯಿಂದಿರಬೇಕಾದ್ದು ಈ ಪ್ರಜೆಗಳಿಗೆ, ಪ್ರಜೆಗಳನ್ನು ಪ್ರತಿನಿಧಿಸುವ ಸಂವಿಧಾನಕ್ಕೆ, ಸಂವಿಧಾನ ಅಪೇಕ್ಷಿಸುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ. ಪ್ರಭುತ್ವದ ತಪ್ಪು ಹೆಜ್ಜೆಗಳನ್ನು ಗುರುತಿಸುವುದು ಪ್ರಜೆಗಳ ಆದ್ಯತೆಯಾಗಬೇಕು. ನಮ್ಮ ಈ ಹೊಣೆಗಾರಿಕೆಯನ್ನು ನಾವು, ಅಂದರೆ ಭಾರತದ ಸಾರ್ವಭೌಮ ಪ್ರಜೆಗಳಾದ ನಾವು, ಅರಿತಿದ್ದಲ್ಲಿ ಸಮಾಜದ ಕಣ್ಗಾವಲು ತೀಕ್ಷ್ಣವಾಗಿರುತ್ತಿತ್ತು.

ನಾವು ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ನಮ್ಮನ್ನು ನಾವೇ ಪ್ರಭುತ್ವದ ಮಡಿಲಿಗೆ ಅರ್ಪಿಸಿಕೊಂಡುಬಿಟ್ಟಿದ್ದೇವೆ. ನಮ್ಮಿಂದಲೇ ಆಯ್ಕೆಯಾಗುವ ಪ್ರತಿನಿಧಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡುತ್ತಲೇ ನಾವು ಕಾಲಾಳುಗಳಾಗಿಬಿಟ್ಟಿದ್ದೇವೆ. ಜಾತಿಯ ಮುಸುಕು, ಮತಧರ್ಮದ ಹೊದಿಕೆ, ಅಸ್ಮಿತೆಯ ಸೋಗು, ಸ್ವಾಮಿ ನಿಷ್ಠೆಯ ಪರದೆ ನಮ್ಮ ಕಣ್ಣುಗಳಿಗೆ ಶಾಶ್ವತ ಪಟ್ಟಿಗಳನ್ನು ಬಿಗಿದುಬಿಟ್ಟಿವೆ. ಮಂದಿರಕ್ಕಾಗಿ ಜೀವ ತೆತ್ತು ಹೋರಾಡುತ್ತೇವೆ, ಮಸೀದಿಗಾಗಿ ಹಂಬಲಿಸುತ್ತೇವೆ, ಜಾತಿ ಶ್ರೇಷ್ಠತೆಗಾಗಿ ಕೊಲ್ಲಲೂ ಸಿದ್ಧರಾಗಿದ್ದೇವೆ, ಒಬ್ಬ ನಾಯಕನಿಗಾಗಿ ಜೀವನ ಮುಡಿಪಾಗಿರಿಸುತ್ತೇವೆ, ಒಂದು ಪಕ್ಷಕ್ಕಾಗಿ ಜೀವ ಸವೆಸುತ್ತೇವೆ. ಪ್ರಾತಿನಿಧಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇವೆಲ್ಲವೂ ಸಹಜ ಪ್ರಕ್ರಿಯೆಗಳು ಎನ್ನುವುದು ದಿಟವಾದರೂ, ಈ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಳ್ಳಬೇಕಲ್ಲವೇ ? ಈ ಜಾಗೃತಿಯೇ ಪ್ರಜೆಗಳ ಕಣ್ಗಾವಲು ಅಲ್ಲವೇ ?


Provided by

ಇದು ಸಾಧ್ಯವಾಗಿದೆಯೇ ? ಈ ದೇಶದ ಆಳುವ ವರ್ಗಗಳಿಗೆ, ಅಧಿಕಾರರೂಢರಿಗೆ ಆತ್ಮಸಾಕ್ಷಿ ಸತ್ತುಹೋಗಿದೆ. ಆದರೆ ನಮ್ಮೊಳಗೊಂದು ಆತ್ಮಸಾಕ್ಷಿ ಜೀವಂತಿಕೆಯಿಂದಿದೆ ಅಲ್ಲವೇ ? ಹೌದು ಎಂದಾದರೆ, ನಾವೇಕೆ ಸಾಕ್ಷಿ ಕೇಳುತ್ತಿಲ್ಲ. ಏಕೆ ಪ್ರಶ್ನಿಸುತ್ತಿಲ್ಲ. ಪುಲ್ವಾಮಾದಲ್ಲಿ ಐವತ್ತು ಅಮಾಯಕ ಜೀವಗಳು ಬಲಿಯಾದವು. ಏಕೆ ಹೀಗಾಯಿತು ಎಂದು ಕೇಳಬೇಕಿತ್ತಲ್ಲವೇ, ಯಾರು ಹೊಣೆ ಎಂದು ಪ್ರಶ್ನಿಸಬೇಕಿತ್ತಲ್ಲವೇ ? ಕಳೆದ ವರ್ಷ ನೂರಾರು ವಲಸೆ ಕಾರ್ಮಿಕರು ದಿಕ್ಕಿಲ್ಲದ ಪರದೇಶಿಗಳಂತೆ ವಿದಾಯ ಹೇಳಿದರು. ಅವರ ದುಸ್ಥಿತಿಗೆ ಕಾರಣವೇನು, ಅವರ ಸಾವಿಗೆ ಕಾರಣಕರ್ತರು ಯಾರು ಎಂದು ಪ್ರಶ್ನಿಸಬೇಕಲ್ಲವೇ ? ನೋಟು ರದ್ದತಿಯಿಂದ ಬೀದಿ ಪಾಲಾದ ಲಕ್ಷಾಂತರ ಜನರ ಬದುಕು ದುರ್ಗಮ ಹಾದಿ ಹಿಡಿಯಲು ಕಾರಣವೇನು ಎಂದು ಪ್ರಶ್ನಿಸಬೇಕಲ್ಲವೇ ? ಲಕ್ಷಾಂತರ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಳಬೇಕಿತ್ತಲ್ಲವೇ ? ಆಮ್ಲಜನಕ ಇಲ್ಲದೆ ಪ್ರಾಣಕಳೆದುಕೊಂಡ ಅಮಾಯಕರ ಸಾವಿಗೆ ಏನು ಕಾರಣ ಎಂದು ಪ್ರಶ್ನಿಸಬೇಕಲ್ಲವೇ ?

ನಮಗೆ ಮಸೂರಗಳನ್ನು ಪ್ರಭುತ್ವವೇ ತೊಡಿಸಿಬಿಟ್ಟಿದೆ. ಕಣ್ಣು ನಮ್ಮದೇ ಆದರೂ ಕಣ್ಣೋಟ ನಮ್ಮದಾಗಿ ಉಳಿದಿಲ್ಲ. ಪ್ರಭುತ್ವ ತೋರುವ ಹಾದಿಯೇ ಅಂತಿಮ ಎಂಬ ಕುರುಡು ನಂಬಿಕೆಯಿಂದ, ಹೆಜ್ಜೆ ಹೆಜ್ಜೆಗೂ ಸಂವಿಧಾನದ ಉಲ್ಲಂಘನೆಯಾಗುತ್ತಿದ್ದರೂ ಮೌನ ವಹಿಸಿದ್ದೇವೆ. ಏಕೆಂದರೆ ಈ ತಪ್ಪು ಹೆಜ್ಜೆಗಳನ್ನು ನಾವು ನೋಡುತ್ತಿರುವುದು ಪ್ರಭುತ್ವದ ಕಣ್ಣುಗಳ ಮೂಲಕ. ನಮ್ಮ ದೃಷ್ಟಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದ್ದೇವೆ. ನಮ್ಮ ದೃಷ್ಟಿಕೋನ ಮತ್ತಾವುದೋ ಶಕ್ತಿಯ ನಿಯಂತ್ರಣದಲ್ಲಿದೆ. ಹಾಗಾಗಿಯೇ ಪ್ರಭುತ್ವದ ವ್ಯಾಖ್ಯಾನಗಳನ್ನೇ ನಾವು ಸ್ವೀಕರಿಸುತ್ತೇವೆ, ಆಳುವ ವರ್ಗಗಳ ನಿರೂಪಣೆಯನ್ನೇ ನಂಬುತ್ತೇವೆ. ಅಪರಾಧಿಗಳು ಶಾಸನ ಸಭೆಗಳಲ್ಲಿ ರಾರಾಜಿಸುವುದನ್ನು ಸಮ್ಮತಿಸುತ್ತೇವೆ, ನಿರಪರಾಧಿಗಳು ಅಮಾಯಕರು ಸೆರೆಮನೆಯಲ್ಲಿರುವುದನ್ನು ಸಂಭ್ರಮಿಸುತ್ತೇವೆ.

ಈಗ ಪ್ರಭುತ್ವ ತನ್ನ ಕಣ್ಗಾವಲು ಸಾಧನಗಳನ್ನು ತೀಕ್ಷ್ಣಗೊಳಿಸಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದೇವೆ. ಪೆಗಾಸಸ್ ನಮ್ಮ ಕಣ್ತೆರೆಸಿದೆ, ನಿದ್ದೆಗೆಡಿಸಿದೆ. ಆದರೆ ಪೆಗಾಸಸ್ ಒಂದು ನಿಮಿತ್ತ  ಅಲ್ಲವೇ ? ಇಂದು ಆಧುನಿಕ ತಂತ್ರಜ್ಞಾನವನ್ನು ಬಳಸುವ ಯಾವೊಬ್ಬ ಪ್ರಜೆಯೂ ಪ್ರಭುತ್ವದ ಕಣ್ಗಾವಲಿನಿಂದ ಮುಕ್ತವಾಗಿರಲು ಸಾಧ್ಯವೇ ಇಲ್ಲ . ನಮ್ಮ ಸ್ಮಾರ್ಟ್‍ಫೋನ್ ಜೇಬಿನಲ್ಲೇ ಇದ್ದರೂ, ಒಂದು ಹೋಟೆಲಿನ ಒಳಹೊಕ್ಕು ಹೊರಬಂದರೆ, ಆ ಹೋಟೆಲ್ ನಮಗೆ ಧನ್ಯವಾದದ ಸಂದೇಶ ಕಳುಹಿಸುತ್ತದೆ. ಅಂದರೆ ನಮ್ಮ ಪ್ರತಿಯೊಂದು ಚಲನವಲನಗಳನ್ನೂ ಉಪಗ್ರಹಗಳು ಸೆರೆಹಿಡಿಯುತ್ತಿವೆ. ಈ ಉಪಗ್ರಹಗಳಿಲ್ಲದೆ ನಮ್ಮ ಬದುಕು ಸಾಗುವುದಿಲ್ಲ. ನಮ್ಮ ಆದಾಯ, ವೆಚ್ಚ ಮತ್ತು ಐಷಾರಾಮಿ ಖರೀದಿಗಳೆಲ್ಲವೂ ಉಪಗ್ರಹ ಮುಖೇನ ಪ್ರಭುತ್ವದ ಮಾಹಿತಿ ಕೋಶದಲ್ಲಿ ದಾಖಲಾಗುತ್ತದೆ.

ತಂತ್ರಜ್ಞಾನದ ಅವಿಷ್ಕಾರಗಳು ನಮ್ಮ ಬದುಕಿಗೆ ಅಗೋಚರ ಸಂಕೋಲೆಗಳನ್ನು ತೊಡಿಸಿಬಿಟ್ಟಿವೆ. ಈ ಸಂಕೋಲೆಗಳು ನಮ್ಮನ್ನು ಬೌದ್ಧಿಕ ದಾಸ್ಯಕ್ಕೊಳಪಡಿಸಿವೆ. ಸಮಾಜದ ಅಂತಃಸಾಕ್ಷಿಯನ್ನು ಜೋಪಾನವಾಗಿ ಕಾಪಾಡಬೇಕಾದ ಜವಾಬ್ದಾರಿ ಇರುವ ಬೌದ್ಧಿಕ ವಲಯ ಇಂದು ಈ ಸಂಕೋಲೆಗಳಿಂದ ಅಸಹಾಯಕವಾದಂತೆ ಕಾಣುತ್ತಿದೆ. ಸಾರ್ವಭೌಮ ಪ್ರಜೆಗಳ ಪ್ರತಿಯೊಂದು ಖರ್ಚು ವೆಚ್ಚವನ್ನೂ ಪ್ರಭುತ್ವ ದಾಖಲಿಸುತ್ತದೆ. ಅಕ್ರಮ ಆದಾಯವನ್ನು ಗುರುತಿಸುತ್ತದೆ, ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುತ್ತದೆ, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ದೇಶದ ಏಕತೆ, ಅಖಂಡತೆ, ಸಮಗ್ರತೆಯನ್ನು ಸಂರಕ್ಷಿಸಲು ಇದು ಅನಿವಾರ್ಯ ಎಂದು ನಮ್ಮನ್ನು ನಂಬಿಸಲಾಗುತ್ತದೆ. ಆದರೆ ಈ “ ಅಕ್ರಮ ” ನಿಷ್ಕರ್ಷೆಯಾಗುವುದು ಎಲ್ಲಿ  ? ಯಾರಿಂದ ? ಈ ನಿರೂಪಣೆಯ ಕರ್ತೃಗಳು   ಯಾರು ? ಈ ದೇಶದ ಪ್ರಭುತ್ವವನ್ನು ಪ್ರತಿನಿಧಿಸುವ ಚುನಾಯಿತ ಸರ್ಕಾರಗಳು, ಅಂದರೆ ಪ್ರಜಾ ಪ್ರತಿನಿಧಿಗಳು.

ಈ ಆಳುವ ವರ್ಗಗಳನ್ನು, ಜನಪ್ರತಿನಿಧಿಗಳನ್ನು ಮತ್ತು ಅವರು ನಿರ್ವಹಿಸುವ “ ಸರ್ಕಾರ ” ಎನ್ನಲಾಗುವ ಸೂತ್ರವನ್ನು ಸದಾ ಗಮನಿಸುತ್ತಿರಬೇಕಾದ ನೈತಿಕ ಜವಾಬ್ದಾರಿ ನಮ್ಮದೇ ಅಲ್ಲವೇ ? ಈ ದೇಶದ ಸಂವಿಧಾನವೇ ನಮ್ಮ ಕಣ್ಗಾವಲಿನ ಸಾಧನ ಅಲ್ಲವೇ ? ಈ ಸಾಧನವನ್ನು ನಾವು ಬಳಸುತ್ತಿದ್ದೇವೆಯೇ ? ನಮ್ಮ ಆತ್ಮಸಾಕ್ಷಿ ಇನ್ನೂ ಸತ್ತಿಲ್ಲ ಎನ್ನುವುದಾದರೆ ಪ್ರಶ್ನಿಸಿಕೊಳ್ಳೋಣ. ನಾವೇಕೆ ನಮ್ಮ ಬಳಿ ಇರುವ ಸಾಂವಿಧಾನಿಕ ಹಕ್ಕುಗಳ ಕಣ್ಗಾವಲು ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ ? ಏಕೆಂದರೆ ಕಣ್ಗಾವಲು ಕಾರ್ಯಗತವಾಗಲು ಕಣ್ಣುಗಳು ತೆರೆದಿರಬೇಕು. ಕಣ್ಣ ಮೇಲಿನ ಪೊರೆ ಸರಿದಿರಬೇಕು. ಕವಿದಿರುವ ಪೊರೆಯನ್ನು ತೆಗೆದುಹಾಕುವ ಇಚ್ಚಾಶಕ್ತಿ ನಮ್ಮಲ್ಲಿರಬೇಕು. ಈ ಇಚ್ಚಾಶಕ್ತಿಯನ್ನೇ ಕಳೆದುಕೊಂಡಿರುವ ಸಮಾಜದಿಂದ ಏನು ನಿರೀಕ್ಷಿಸಲು ಸಾಧ್ಯ ?

ಇನ್ನಷ್ಟು ಸುದ್ದಿಗಳು…

ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನದಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಅತ್ತೆಯೂ ನೀರುಪಾಲು | ನೀರು ಕುಡಿಯಲು ಹೋದ ವೇಳೆ ನಡೆದದ್ದೇನು?

ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ

ಬಿಜೆಪಿಗೆ ತಲೆ ನೋವಾದ ಸ್ವಾಮೀಜಿಗಳು | ಈಶ್ವರಪ್ಪರನ್ನು ಡಿಸಿಎಂ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ಬಿಜೆಪಿಗೆ ಬೆದರಿಕೆ

ಮುಂದಿನ ಟಾರ್ಗೆಟ್ ಈಶ್ವರಪ್ಪ, ಜಗದೀಶ್ ಶೆಟ್ಟರ್? | ಯಡಿಯೂರಪ್ಪರ  ಬಳಿಕ ನಿವೃತ್ತರಾಗುತ್ತಾರಾ ಹಿರಿಯ ನಾಯಕರು?

ಇತ್ತೀಚಿನ ಸುದ್ದಿ