ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ ಕೊವಿಡ್ ಗೆ ಬಲಿ
ತುಮಕೂರು: ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಪ್ರಮುಖ ಆರೋಪಿ ಶಿವಕುಮಾರ್ ಕೊವಿಡ್ ಗೆ ಬಲಿಯಾಗಿದ್ದು, ಈ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿನ ದೊಡ್ಡದೊಡ್ಡ ಕುಳಗಳು ವಿರುದ್ಧ ತನಿಖೆಗೆ ತೀವ್ರ ಹಿನ್ನಡೆಯಾದಂತಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ 65 ವರ್ಷ ವಯಸ್ಸಿನ ಶಿವಕುಮಾರ್ ಮೃತಪಟ್ಟವರಾಗಿದ್ದಾರೆ. 2016ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯನ್ನು 2 ಬಾರಿ ಈತ ಸೋರಿಕೆ ಮಾಡಿದ್ದರು. 2011 ಮತ್ತು 2012ರಲ್ಲಿ ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಶಿವಕುಮಾರ್ ವಿರುದ್ಧ ದೂರು ದಾಖಲಾಗಿತ್ತು. 2013ರಲ್ಲಿ ಬೆಂಗಳೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದೇವೇಂದ್ರ, ತುಮಕೂರಿನ ಮಲ್ಲೇಶ್ ಬಂಧಿಸಲಾಗಿತ್ತು. ಆಗ ಸೋರಿಕೆ ಹಗರಣದ ಕಿಂಗ್ ಪಿನ್ ಶಿವಕುಮಾರ್ ಎಂಬುದು ಬಹಿರಂಗವಾಗಿತ್ತು.
2016ರಲ್ಲಿ ಎರಡು ಬಾರಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, 2018ರಲ್ಲಿ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿಯೂ ಶಿವಕುಮಾರ್ ಆರೋಪಿ. ಹಲವಾರು ಪ್ರಕರಣದಲ್ಲಿ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದರು.