ಪ್ರಾಥಮಿಕ ಶಾಲಾ ಶಿಕ್ಷಕನ ಆಸ್ತಿಯ ಮೊತ್ತ ಕಂಡು ಬೆಚ್ಚಿಬಿದ್ದ ಲೋಕಾಯುಕ್ತ ಅಧಿಕಾರಿಗಳು - Mahanayaka
8:27 PM Wednesday 5 - February 2025

ಪ್ರಾಥಮಿಕ ಶಾಲಾ ಶಿಕ್ಷಕನ ಆಸ್ತಿಯ ಮೊತ್ತ ಕಂಡು ಬೆಚ್ಚಿಬಿದ್ದ ಲೋಕಾಯುಕ್ತ ಅಧಿಕಾರಿಗಳು

17/03/2021

ಮಧ್ಯಪ್ರದೇಶ: ಹೆಸರಿಗೆ ಈ ವ್ಯಕ್ತಿ  ಪ್ರಾಥಮಿಕ ಶಾಲೆಯ ಶಿಕ್ಷಕ ಆದರೆ, ಇದೀಗ ಆತ 125 ಕೋಟಿ ರೂಪಾಯಿ ಆಸ್ತಿಯ ಒಡೆಯ ಎನ್ನುವುದು ಬೆಳಕಿಗೆ ಬಂದಿದ್ದು, ಪ್ರಾಥಮಿಕ ಶಾಲೆಯ ಶಿಕ್ಷಕನೋರ್ವ ಇಷ್ಟೊಂದು ದೊಡ್ಡ ಮಟ್ಟದ ಆಸ್ತಿಯನ್ನು ಹೊಂದಿದ್ದಾನೆ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಗಿದೆ.

ಮಧ್ಯಪ್ರದೇಶದ ಪ್ರಾಥಮಿಕ ಶಾಲಾ ಶಿಕ್ಷಕ ಪಂಕಜ್ ರಾಮ್ಜನ್ ಶ್ರೀವಾಸ್ತವ್ ಗೆ ಸೇರಿದ ಹಲವು ಆಸ್ತಿಗಳ ಮೇಲೆ ಭೋಪಾಲ್‌ ಲೋಕಾಯುಕ್ತ ಹತ್ತು ಸದಸ್ಯರ ತಂಡ ದಾಳಿ ನಡೆಸಿದ್ದು, ಈ ವೇಳೆ ಭೋಪಾಲ್‌ನ ಮಿನಲ್ ರೆಸಿಡೆನ್ಸಿಯಲ್ಲಿರುವ ಮನೆ, ಪಂಕಜ್‌ʼನ ಬೆತುಲ್, ಚಿಂದ್ವಾರ, ಭೋಪಾಲ್ ಮತ್ತು ನಾಗ್ಪುರದ 24ಕ್ಕೂ ಹೆಚ್ಚು ಆಸ್ತಿಗಳು ಪತ್ತೆಯಾದ ಬಗ್ಗೆ ವರದಿಯಾಗಿವೆ. ಇದರಲ್ಲಿ ಪ್ಲಾಟ್‌ಗಳು, ಪಿಪರಿಯಾ ಜಟ್‌ಪೀರ್‌ನಲ್ಲಿ ಒಂದು ಎಕರೆ ಭೂಮಿ, ಚಿಂದ್ವಾರದಲ್ಲಿ ಆರು ಎಕರೆ ಭೂಮಿ, ಬೆತುಲ್‌ನಲ್ಲಿ ಎಂಟು ವಸತಿ ಪ್ಲಾಟ್‌ಗಳು, ಬಾಗ್ದೋನಾದ ಆರು ಅಂಗಡಿಗಳು ಮತ್ತು ಹತ್ತು ವಿವಿಧ ಹಳ್ಳಿಗಳಲ್ಲಿ ಒಟ್ಟು 25 ಎಕರೆ ಕೃಷಿ ಭೂಮಿಗಳನ್ನು ಪಂಕಜ್ ಹೊಂದಿರುವುದು ತಿಳಿದು ಬಂದಿದೆ.

ಘೊಡೊಂಗ್ರಿ ಬ್ಲಾಕ್‌ʼನ ರೆಂಗಾಧನದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಪಂಕಜ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಪಂಕಜ್ ಅವರ ಆಸ್ತಿ ತನಿಖೆ ಹಂತದಲ್ಲಿದ್ದು, ಅಸಮಾನ ಆಸ್ತಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪಂಕಜ್ ವಿರುದ್ಧ ಪ್ರಕರಣ ದಾಖಲಾಗಿದೆ.

1998 ರಲ್ಲಿ 2,256 ರೂ.ಗಳ ಸಂಬಳದಲ್ಲಿ ಪಂಕಜ್ ಶಿಕ್ಷಣ ಇಲಾಖೆಗೆ ಸೇರಿದ್ದರು. ಪ್ರಸ್ತುತ ಪಂಕಜ್ ಅವರ ಸಂಬಳ ತಿಂಗಳಿಗೆ ಸುಮಾರು 40,000 ರೂ. 23 ವರ್ಷದ ಉದ್ಯೋಗದಲ್ಲಿ ಪಂಕಜ್‌ ಗೆ 36,50,500 ರೂ.ಗಳ ಸಂಬಳ ಸಿಕ್ಕಿದೆ ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದ್ದಾರೆ. ಆದರೆ 125 ಕೋ. ರೂ. ಆಸ್ತಿಯನ್ನು ಅವರು ಹೇಗೆ ಗಳಿಸಿದರು ಎಂಬ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ