ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತೆ ಮೂವರು ಆರೋಪಿಗಳ ಬಂಧನ: ಬಂಧಿತರ ಸಂಖ್ಯೆ 10ಕ್ಕೆ ಏರಿಕೆ - Mahanayaka
8:15 PM Thursday 12 - December 2024

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತೆ ಮೂವರು ಆರೋಪಿಗಳ ಬಂಧನ: ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

praveen nettaru
11/08/2022

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ10ಕ್ಕೆ ಏರಿಕೆಯಾಗಿದೆ.

ಬಂಧಿತರನ್ನು ಸುಳ್ಯ ನಿವಾಸಿ ಶಿಯಾಬುದ್ದೀನ್ ಆಲಿ (33),  ರಿಯಾಝ್ ಅಂಕತಡ್ಕ‌ (29), ಸುಬ್ರಹ್ಮಣ್ಯ ಎಳಿಮಲೆ ನಿವಾಸಿ ಬಶೀರ್(29) ಎಂದು ಗುರುತಿಸಲಾಗಿದೆ.

ಇವರನ್ನು ತಲಪಾಡಿಯಲ್ಲಿ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಿಯಾಝ್ ಅಂಕತಡ್ಕ ಚಿಕನ್ ಸ್ಟಾಲ್ ಗಳಿಗೆ ಕೋಳಿ ಸಪ್ಲೈ ಮಾಡುತ್ತಿದ್ದು, ಬಶೀರ್ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದವನಾಗಿದ್ದಾನೆ. ಅದೇ ರೀತಿ ಶಿಯಾಬುದ್ದೀನ್ ಕೊಕೊ ಸಪ್ಲೈ ಮಾಡುವ ಕೆಲಸ ನಿರ್ವಹಿಸುತ್ತಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಬಂಧಿತರಿಗೆ ಆಶ್ರಯ ನೀಡಿದವರು, ಸಹಕರಿಸಿದವರ ಕುರಿತಂತೆ ಸಮಗ್ರ ವಿಚಾರಣೆ ನಡೆಸಿ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಲಾಗುವುದು ಎಂದು ಎಡಿಜಿಪಿ ವಿವರಿಸಿದರು.

ಪ್ರವೀಣ್ ನನ್ನೇ ಯಾಕೆ ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಕೂಡ ಪಡೆಯಲಾಗುವುದು ಎಂದರು. ಬಂಧಿತರ ಹಿನ್ನೆಲೆಯ ಬಗ್ಗೆ ಕಸ್ಟಡಿಗೆ ಪಡೆದು ಮಾಹಿತಿ ಪಡೆಯಲಾಗುವುದು. ಬಂಧಿತ ಪ್ರಮುಖ ಆರೋಪಿಗಳು ಈ ಹಿಂದೆ ಯಾವುದೇ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆಯೂ ವಿಚಾರಣೆ ಮುಂದುವರಿಯಲಿದೆ ಎಂದರು.

ಆರೋಪಿಗಳಿಗೆ ಪಿಎಫ್ ಐ , ಎಸ್ ಡಿಪಿಐ ಜತೆ ಸಂಪರ್ಕ ಇರುವ ಶಂಕೆ ಇದೆ. ಈ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಲಾಗುವುದು ಆದ್ದರಿಂದ ಈ ಹಂತದಲ್ಲಿ ಏನನ್ನೂ ಹೇಳಲಾಗದು. ತನಿಖಾಧಿಕಾರಿ ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿ ವರದಿ ಸಲ್ಲಿಸಲಿದ್ದಾರೆ. ಹತ್ಯೆ ಆರೋಪಿಗಳು ಪ್ರಕರಣದ ಸಂದರ್ಭ ಹಾಗೂ ನಂತರ ಒಟ್ಟು ಐದು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರನ್ನು ಬಳಸಿದ್ದು ಅವುಗಳನ್ನು ಶೀಘ್ರವೇ ದಸ್ತಗಿರಿ ಮಾಡಲಾಗುವುದು ಎಂದು ಎಡಿಜಿಪಿ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ