ಪ್ರೀತಿಸಿದ್ದಕ್ಕಾಗಿ ಮರಕ್ಕೆ ಕಟ್ಟಿ ಹಾಕಿ ಯುವಕ-ಯುವತಿಗೆ  ಮಾರಣಾಂತಿಕ ಹಲ್ಲೆ - Mahanayaka

ಪ್ರೀತಿಸಿದ್ದಕ್ಕಾಗಿ ಮರಕ್ಕೆ ಕಟ್ಟಿ ಹಾಕಿ ಯುವಕ-ಯುವತಿಗೆ  ಮಾರಣಾಂತಿಕ ಹಲ್ಲೆ

love
30/06/2021

ಬಿಹಾರ: ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ದಾಳಿ ಮಾಡುವ ನಮ್ಮ ಸಾಮಾಜಿಕ ವ್ಯವಸ್ಥೆ ಈ ಆಧುನಿಕ ಕಾಲದಲ್ಲಿಯೂ ಬದಲಾಗಿಲ್ಲ. ಪ್ರಾಣಿಗಳು ನಮ್ಮ ದೇಶದಲ್ಲಿ ಸ್ವತಂತ್ರವಾಗಿರುವಷ್ಟು ಮನುಷ್ಯ ಸ್ವತಂತ್ರವಾಗಿಲ್ಲ ಎನ್ನುವುದು ಕೆಲವೊಂದು ಘಟನೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಕೇಳಿ ಬರುವಂತಹ ಮಾತುಗಳು. ಇಲ್ಲಿ ದ್ವೇಷಿಸಿಕೊಂಡು ಬದುಕುವ ಮನಸ್ಥಿತಿಗಳು ಹೆಚ್ಚಾಗುತ್ತಿವೆ. ಇನ್ನೊಬ್ಬರ ಜೀವನವನ್ನು ಹಾಳುಗೆಡವಿ ಸಂತೋಷಪಡುವ ಮನಸ್ಥಿತಿಗಳು ಹೆಚ್ಚಾಗುತ್ತಿವೆ.

ಬಿಹಾರದ ಸಮಸ್ತಿಪುರದಲ್ಲಿ ನಡೆದಿರುವ ಈ ಘಟನೆ ಮಾನವ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಯುವಕ-ಯುವತಿಯರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ. ಹೆಣ್ಣು ಎನ್ನುವುದನ್ನೂ ನೋಡದೆ ವ್ಯಕ್ತಿಯೋರ್ವ ಯುವತಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯ ಜನರನ್ನು ರೊಚ್ಚಿಗೆಬ್ಬಿಸಿದೆ.

ಯುವಕ-ಯುವತಿ ಪ್ರೀತಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಸಾರ್ವಜನಿಕ ಪ್ರದೇಶದಲ್ಲಿ ಕಟ್ಟಿಹಾಕಿ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮನ್ನು ಕ್ಷಮಿಸಿ ಎಂದು ಆ ಜೋಡಿ ಹೃದಯವಿದ್ರಾವಕವಾಗಿ ಬೇಡಿಕೊಂಡರೂ, ಬಿಡದೇ ಥಳಿಸುತ್ತಿರುವ ಮನುವಾದಿ ಮನಸ್ಥಿತಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅವರ ಮನೆಯ ದೋಸೆಯಲ್ಲಿ ನೂರಾರು ತೂತು ಇದ್ದರೂ ಪಕ್ಕದ ಮನೆಯವನ ದೋಸೆಯಲ್ಲಿ ತೂತು ಹುಡುಕುವ ನಮ್ಮ ಸಮಾಜದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗುತ್ತಿವೆ. ಎಲ್ಲೋ ಬಿಹಾರದಲ್ಲಿ ನಡೆದ ಘಟನೆಯಾಗಿದ್ದರೂ, ಇಂತಹ ಮನಸ್ಥಿತಿಗಳು ಎಲ್ಲೆಡೆ ಬೆಳೆಯುತ್ತಿವೆ. ಅದರಲ್ಲೂ ದೊಡ್ಡ ವಿದ್ಯಾವಂತರು ಎನಿಸಿಕೊಂಡಿರುವವರೇ ಇಂತಹ ಮನಸ್ಥಿತಿ ಹೊಂದಿರುವುದು ಇನ್ನಷ್ಟು ಅಪಾಯಕಾರಿಯಾಗಿದೆ.

ಸದ್ಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಗ್ರಾಮದಲ್ಲಿ ಇಷ್ಟೊಂದು ಹೀನಾಯ ಘಟನೆ ನಡೆದಿದ್ದರೂ, ಸ್ಥಳೀಯ ಪೊಲೀಸರು ವಿಡಿಯೋ ನೋಡಿ ಎಚ್ಚೆತ್ತುಕೊಂಡಿದ್ದಾರೆ ಎಂದರೆ ಯಾವುದೋ ಹಳೆಯ ಕಾಲದ ಹಾಸ್ಯ ಎನಿಸಿಕೊಳ್ಳಬಹುದು. ಬಹಳಷ್ಟು ಬಾರಿ ಇಂತಹ ಪ್ರಕರಣಗಳು ನಡೆದಾಗ ಆರಂಭದಲ್ಲಿ ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿ ಆ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡುತ್ತಾರೆ. ಆತ ಮತ್ತೆ ಬಿಡುಗಡೆಯಾಗಿ ಅದೇ ಕೆಲಸ ಮುಂದುವರಿಸುತ್ತಾನೆ.  ಪೊಲೀಸರು ಆರೋಪಿಗಳ ವಿರುದ್ಧ ಬಲವಾದ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒದಗಿಸಿದರೆ, ಇಂತಹ ಘಟನೆಗಳು ಮರುಳಿಸದಂತೆ ಆರೋಪಿಗಳು ಕಾನೂನಿನ ಕೈ ಸಿಗುತ್ತಾರೆ. ಬೇರೆಯವರು ಆಗ ಇಂತಹ ಕೆಲಸ ಮಾಡಲು ಹಿಂಜರಿಯುತ್ತಾರೆ. ಆದರೆ, ಪೊಲೀಸ್ ಠಾಣೆಗಳಲ್ಲಿಯೇ ಇಂತಹ ಘಟನೆಗಳು ರಾಜಿಯಲ್ಲಿ ಮುಗಿದು ಹೋಗಿರುತ್ತದೆ ಎನ್ನುವ ನಿರಾಸೆಯ ಮಾತುಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ