ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೋರ್ಟ್: ಮದುವೆಯಾಗದಿದ್ದರೂ ಜೊತೆಯಾಗಿ ಜೀವಿಸಬಹುದು!
ಚಂಡೀಗಡ: ಮದುವೆಯಾಗದಿದ್ದರೂ ವಯಸ್ಕ ಜೋಡಿ ಒಟ್ಟಿಗೆ ವಾಸಿಸಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹವಾಗದಿದ್ದರೂ ವಯಸ್ಕ ಜೋಡಿ ಒಟ್ಟಿಗೆ ವಾಸಿಸುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
19 ವರ್ಷದ ಯುವತಿ ಹಾಗೂ 21 ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಮುಂದಾಗಿದ್ದರು. ಆದರೆ ಪೋಷಕರು ಇದಕ್ಕೆ ಒಪ್ಪದೇ ಹುಡುಗಿಯನ್ನು ಕೂಡಿ ಹಾಕಿದ್ದರು. ಇದಾದ ಬಳಿಕ ಯುವತಿ ಮನೆಯಿಂದ ತಪ್ಪಿಸಿಕೊಂಡು ಯುವಕನೊಂದಿಗೆ ವಾಸಿಸುತ್ತಿದ್ದು, ಕುಟುಂಬದ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರ ರಕ್ಷಣೆಕೋರಿ, ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಈ ಅರ್ಜಿ ಪರಿಶೀಲಿಸಿದ ಕೋರ್ಟ್ ಈ ತೀರ್ಪು ನೀಡಿದೆ.
ಯುವತಿ ಅಥವಾ ಯುವಕ ಪರಸ್ಪರ ಜೊತೆಯಾಗಿ ವಾಸಿಸುವ ಹಕ್ಕು ಹೊಂದಿದ್ದಾರೆ. ವಯಸ್ಕರು ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವಲ್ಲಿ ಸ್ವತಂತ್ರರಾಗಿದ್ದಾರೆ. ಮಗಳು ಯಾರೊಂದಿಗೆ ತನ್ನ ಜೀವನವನ್ನು ಕಳೆಯಬೇಕೆಂದು ನಿರ್ಧರಿಸುತ್ತಾಳೆ ಅವರೊಂದಿಗೆ ಜೀವನ ನಡೆಸಬಹುದು. ಪೋಷಕರು ಮಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಲ್ಕಾ ಸರೀನ್ ಅವರ ನ್ಯಾಯಪೀಠ ಆದೇಶ ನೀಡಿದೆ. ಈ ಜೋಡಿ ರಕ್ಷಣೆಗೆ ಮಾಡಿದ ಮನವಿಯನ್ನು ಪರಿಶೀಲಿಸುವಂತೆ ಫತೇಗರ್ ಸಾಹೇಬ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.