ಅಂಬೇಡ್ಕರ್ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ರಾಷ್ಟ್ರಪತಿ | ಈ ಸ್ಮಾರಕದ ವಿಶೇಷ ಏನು ಗೊತ್ತಾ?
ಲಖನೌ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆಯನ್ನು ಮಂಗಳವಾರ ನೆರವೇರಿಸಿದರು.
ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಶಂಕುಸ್ಥಾಪನೆ ನೇರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ ಭಾಗವಹಿಸಿದ್ದರು.
ಐಶ್ ಭಾಗ್‌ನಲ್ಲಿ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಉತ್ತರ ಪ್ರದೇಶ ಸಂಪುಟವು ಕಳೆದ ವಾರ ಅನುಮೋದನೆ ನೀಡಿತ್ತು. ಐಶ್ ಬಾಗ್ ಈದ್ಗಾನಲ್ಲಿ 5493.52 ಚದರ ಮೀಟರ್ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುವುದು. ಅಲ್ಲದೆ ಇಲ್ಲಿ 25 ಅಡಿ ಎತ್ತರದ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು.
ಒಟ್ಟು 45.04 ಕೋಟಿ ರೂ. ಈ ಯೋಜನೆಗೆ ವೆಚ್ಚವಾಗಲಿದೆ. ಈ ಸ್ಮಾರಕದಲ್ಲಿ 750 ಜನರ ಸಾಮರ್ಥ್ಯವಿರುವ ಸಭಾಂಗಣ, ಗ್ರಂಥಾಲಯ, ಸಂಶೋಧನಾ ಕೇಂದ್ರ, ಚಿತ್ರ ಗ್ಯಾಲರಿ, ಮ್ಯೂಸಿಯಂ, ಬಹುಪಯೋಗಿ ಸಮಾವೇಶ ಕೇಂದ್ರ, ಕೆಫೆಟೇರಿಯಾ, ವಸತಿ ನಿಲಯ ಮತ್ತು ಇತರ ಸೌಲಭ್ಯಗಳಿರುತ್ತವೆ.