ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ: CCTVಯಲ್ಲಿ ದೃಶ್ಯ ಸೆರೆ

ಚಾಮರಾಜನಗರ: ತಟ್ಟೆ ಕಾಸಿಗಾಗಿ ಪೂಜಾರಿಗಳು ಹೊಡೆದಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ನಡೆದಿದೆ
ಯಂತ್ರ ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಹಣದ ವಿಚಾರಕ್ಕೆ ಅರ್ಚಕ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ವೈರಲ್ಲಾಗಿದೆ. ಘಟನೆ ಎರಡು ಮೂರು ದಿನದ ಹಿಂದೆ ನಡೆದಿದ್ದು ವೀಡಿಯೋ ವೈರಲ್ಲಾದ ಬಳಿಕ ಹೊಡೆದಾಟ ಬೆಳಕಿಗೆ ಬಂದಿದೆ.
ಭಾನುವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ.
ರಾಜ್ಯದಲ್ಲಿಯೇ ಶ್ರೀ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಹೆಸರುವಾಸಿಯಾಗಿದ್ದು ಕಳೆದ 6 ರಿಂದ 10 ರವರೆಗೆ ಅದ್ಧೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಜಾತ್ರೆಗೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಈ ವೇಳೆ ಭಕ್ತರು ಹಾಕಿದ ತಟ್ಟೆ ಕಾಸಿಗೆ ಪೂಜಾರಿಗಳು ಹೊಡೆದಾಡಿಕೊಂಡಿದ್ದಾರೆ.
ದಾಯದಿಗಳ ನಡುವೆ ವೈಮನಸ್ಸು: ಬೊಪ್ಪೇಗೌಡನ ಪೀಠಾಧಿಪತಿ ಪುರದ ಶ್ರೀ ಜ್ಞಾನರಾಜೇ ಅರಸ್ ಹಾಗೂ ದಿ.ಪ್ರಭುದೇವ ರಾಜೇ ಅರಸ್ ಪುತ್ರ ಭರತರಾಜೇ ಅರಸ್ ನಡುವೆ ದೇವಾಲಯ ಆಡಳಿತ ನಿರ್ವಹಣೆ ಹಾಗೂ ಗೋಲಕ ವಿಚಾರವಾಗಿ ವೈ ಮನಸ್ಸು ಉಂಟಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗೆ ಹಳೇ ಮಠದಲ್ಲಿ ಮರದ ಸಾಮಾಗ್ರಿಗಳಿಗೆ ಬೆಂಕಿ ಬಿದ್ದ ವಿಚಾರವಾಗಿ ಶ್ರೀ ಜ್ಞಾನರಾಜೇ ಅರಸ್ ಪತ್ನಿ ಸನ್ಮತಿ ಎಂಬುವರು ಈ ಘಟನೆಗೆ ಭರತರಾಜೇ ಅರಸ್ ಹಾಗೂ ಸಂಗಡಿಗರು ಕಾರಣ ಎಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂತೆಯೇ ಭರತ ರಾಜೇ ಅರಸ್ ಕೂಡ ಜ್ಞಾನ ರಾಜೇ ಅರಸ್ ಮೇಲೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದ್ದರಿಂದ ಈ ಎರಡು ಗುಂಪುಗಳ ನಡುವೆ ವೈಮನಸ್ಸು ಏರ್ಪಟಿತ್ತು.ಅಷ್ಟರಲ್ಲಿ ಜಾತ್ರೆ ಬಂದಿದ್ದು ಜಾತ್ರೆ ನಡೆಸುವ ಸಂಬಂಧ ಜಿಲ್ಲಾಡಳಿತ ಹಾಗೂ ಶಾಸಕ ಆರ್.ನರೇಂದ್ರ ಹಾಗೂ ಶ್ರೀ ಜ್ಞಾನರಾಜೇ ಅರಸ್ ಹಾಗೂ ಭರತರಾಜೇ ಅರಸ್ ಕುಟುಂಬದ ಜತೆ ಸಭೆ ನಡೆಸಿ ನಿಮ್ಮ ಕುಟುಂಬದ ಕಲಹದಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಾತ್ರೆ ನಡೆಸುವ ಖಡಕ್ ವಾರ್ನಿಂಗ್ ಅನ್ನು ಜಿಲ್ಲಾಡಳಿತ ನೀಡಿತ್ತು. ಈ ಎಲ್ಲ ಗೊಂದಲಗಳ ನಡುವೆ ಜಾತ್ರೆ ಯಶಸ್ವಿಯಾಗಿ ನಡೆಯಿತು ಎನ್ನುವಷ್ಟರಲ್ಲಿ ಅರ್ಚಕರ ಗಲಾಟೆ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಯಾರ ನಡುವೆ ಗಲಾಟೆ: ಅರ್ಚಕ ಕುಮಾರ್ ಹಾಗೂ ಮತ್ತೊಬ್ಬ ಅರ್ಚಕ ಶಿವಮೂರ್ತಿ ಅವರ ತಂದೆ ಶಂಕರಪ್ಪ ಹಾಗೂ ಇತನ ಮಗ ಮಹೇಶ್ ಅಲಿಯಾಸ್ ಬಾಲಾಜಿ ನಡುವೆ ಗಲಾಟೆ ನಡೆದಿದೆ. ಭಕ್ತರಿಗೆ ನೀಡುವ ಯಂತ್ರ ಹಣ ಹಾಗೂ ತಟ್ಟೆ ಕಾಸಿನ ಹಂಚಿಕೆ ವಿಚಾರದಲ್ಲಿ ವೈ ಮನಸ್ಸು ಉಂಟಾಗಿ ಈ ಹೊಡೆದಾಟ ನಡೆದಿದ್ದು ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಜಗಳ ಬಿಡಿಸಿದ್ದಾರೆ.
ಅರ್ಚಕರ ನಡುವೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದೆ. ಆದರೆ ಯಾವ ಕಾರಣಕ್ಕೆ ಗೊತ್ತಿಲ್ಲ. ಗಲಾಟೆ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ದೇವಾಲಯದಲ್ಲಿ ಗಲಾಟೆ ಮಾಡುವುದು ತಪ್ಪು ವಿಚಾರಣೆ ನಡೆಸಿ ಕ್ರಮ ಕೈಗೊಳಲಾಗುವುದು ಎಂದು ಕ್ಷೇತ್ರದ ಆಡಳಿದ ಮಂಡಲಿಯ ಸನ್ಮತಿ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw