8 ಚೀತಾಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಯೋಜನೆ ನಮ್ಮದು ಎಂದ ಕಾಂಗ್ರೆಸ್!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ ಗೆ 8 ಚೀತಾಗಳನ್ನು ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ನಶಿಸಿಹೋಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಪ್ರಯತ್ನ ಇದಾಗಿದ್ದು, ದಶಕಗಳ ಬಳಿಕ ದೇಶಕ್ಕೆ ಚೀತಾಗಳನ್ನು ತರಲಾಗಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಮೀಬಿಯಾ ಸರ್ಕಾರದ ಸಹಕಾರ ಇಲ್ಲವಾದಲ್ಲಿ 8 ಚೀತಾಗಳು ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದ ಜೊತೆಗೆ ಇಂದು ಭಾರತಕ್ಕೆ ಮತ್ತೊಂದು ಹೆಮ್ಮೆಯ ದಿನ. 70 ವರ್ಷಗಳ ಬಳಿಕ ದೇಶಕ್ಕೆ ಚೀತಾಗಳ ಆಗಮನವಾಗಿವೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಶಿಸಿಹೋಗಿದ್ದ ಚೀತಾ ಸಂತತಿ ರಕ್ಷಿಸಲು ನಾವು ನಿರ್ಧರಿಸಿದೆವು. ರಾಜತಾಂತ್ರಿಕವಾಗಿ ಇದು ಮಹತ್ವವಲ್ಲ, ಆದರೆ ಪ್ರಕೃತಿ, ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲ ಬೆಳವಣಿಗೆಯಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ನಮ್ಮದು ಎಂದ ಕಾಂಗ್ರೆಸ್:
ಚೀತಾಗಳು ಈಗ ದೇಶಕ್ಕೆ ಬಂದಿದ್ದರೂ, ಅವುಗಳನ್ನು ತರುವ ಯೋಜನೆ ಆರಂಭಿಸಿದ್ದು ನಾವು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾಹಿತಿ ಒದಗಿಸಿದೆ.
‘2008-09ರಲ್ಲಿ ‘ಪ್ರಾಜೆಕ್ಟ್ ಚೀತಾ’ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಅದನ್ನು ಅನುಮೋದಿಸಿತು. 2010ರ ಏಪ್ರಿಲ್ ನಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಆಫ್ರಿಕಾದ ‘ಚೀತಾ ಔಟ್ ರೀಚ್ ಸೆಂಟರ್’ಗೆ ಭೇಟಿ ನೀಡಿದ್ದರು. 2013 ರಲ್ಲಿ ಸುಪ್ರೀಂ ಕೋರ್ಟ್ ಯೋಜನೆಯನ್ನು ರದ್ದು ಮಾಡಿತ್ತು. 2020ರಲ್ಲಿ ನಿಷೇಧವನ್ನು ತೆರವು ಮಾಡಲಾಯಿತು. ಈಗ ಚೀತಾಗಳು ಭಾರತಕ್ಕೆ ಬಂದಿವೆ’ ಎಂದು ಅದು ಹೇಳಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka