ಪ್ರೀತಿಗೆ ಮೋಸ ಮಾಡಿದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗಲೇ ಬೆನ್ನಿಗೆ ಇರಿದ ಯುವತಿ | ಪ್ರಿಯಕರ ಸಾಯುವವರೆಗೂ ಚುಚ್ಚುತ್ತಲೇ ಇದ್ದ ಯುವತಿ - Mahanayaka
3:14 AM Wednesday 11 - December 2024

ಪ್ರೀತಿಗೆ ಮೋಸ ಮಾಡಿದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗಲೇ ಬೆನ್ನಿಗೆ ಇರಿದ ಯುವತಿ | ಪ್ರಿಯಕರ ಸಾಯುವವರೆಗೂ ಚುಚ್ಚುತ್ತಲೇ ಇದ್ದ ಯುವತಿ

12/01/2021

ಧರ್ಮಾವರಂ: ತನ್ನ ಪ್ರೀತಿಗೆ ಮೋಸ ಮಾಡಿದ ಎಂದು ಯುವತಿಯೊಬ್ಬಳು ತನ್ನ ಪ್ರಿಯಕರನ್ನು ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಧರ್ಮಾವರಂ ಬಳಿಯಲ್ಲಿ ನಡೆದಿದ್ದು, ಬೇರೊಂದು ಯುವತಿಯನ್ನು ಪ್ರಿಯಕರ  ಇಷ್ಟಪಡುತ್ತಿದ್ದಾನೆ ತಿಳಿದು ಆಕ್ರೋಶಗೊಂಡಿದ್ದ ಯುವತಿ ಈ ಕೃತ್ಯ ಎಸಗಿದ್ದಾಳೆ.

 23 ವರ್ಷದ ಯುವಕ ಅಂಬಾಟಿ ಕರುಣಾ ತಾತಾಜಿ ತನ್ನ ಪ್ರೇಯಸಿಯಿಂದಲೇ ಹತ್ಯೆಗೀಡಾದ ಯುವಕನಾಗಿದ್ದಾನೆ. 20 ವರ್ಷದ ಗಸಿಕುಟ್ಟಿ ಪಾವನಿ ಹತ್ಯೆ ಆರೋಪಿಯಾಗಿದ್ದಾಳೆ.  ಇವರಿಬ್ಬರು ಹಲವು ಸಮಯಗಳಿಂದಲೂ ಪ್ರೀಸುತ್ತಿದ್ದರು. ಯುವಕ ಸೇಲ್ಸ್ ಮ್ಯಾನ್ ಆಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ. ಈ ನಡುವೆ ಯುವಕನಿಗೆ ಇನ್ನೊಬ್ಬಳು ಯುವತಿ ಪರಿಚಯವಾಗಿದ್ದಾಳೆ.

ಸೋಮವಾರ ರಾತ್ರಿ ತಾತಾಜಿ ಮತ್ತು ಪಾವನಿ ಇಬ್ಬರೂ ಬೈಕ್​​ನಲ್ಲಿ ಮಲಕಪಲ್ಲಿ ಜಿಲ್ಲೆಯ ಕಪಾವರಂ ಎಂಬಲ್ಲಿಂದ 75 ಕಿ.ಮೀ. ದೂರದ ಭೀಮಾವರಂ ಎಂಬಲ್ಲಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಯುವಕ ಅಂಬಾಟಿ ಕರುಣಾ ತಾತಾಜಿ ತಾನು ಇನ್ನೊಂದು ಯುವತಿಯನ್ನು ಇಷ್ಟಪಡುತ್ತಿದ್ದು,  ಆಕೆ ನನಗೆ ಖರ್ಚಿಗೆ ಹಣ ಕೊಡುತ್ತಿದ್ದಾಳೆ ಎಂದು ಹೇಳಿದ್ದಾನೆ.

ಈ ವಿಚಾರ ಕೇಳಿದ ತಕ್ಷಣವೇ ಯುವತಿ ಪಾವನಿ ತೀವ್ರವಾಗಿ ಆಕ್ರೋಶಗೊಂಡಿದ್ದಾಳೆ. ರಾತ್ರಿ 7 ಗಂಟೆಯ ಸುಮಾರಿಗೆ ಧರ್ಮಾವರಂ ಬಳಿ ಬರುತ್ತಿದ್ದಂತೆಯೇ ಯುವತಿಯ ಕೋಪ ಸ್ಫೋಟಗೊಂಡಿದ್ದು, ಬೈಕ್ ಸಂಚರಿಸುತ್ತಿದ್ದಂತೆಯೇ, ತನ್ನ ಬಳಿ ತಂದಿದ್ದ ಚಾಕು ಹೊರ ತೆಗೆದು ತನ್ನ ಪ್ರಿಯಕರನ ಬೆನ್ನಿಗೆ ಆಕ್ರೋಶದಿಂದ ಚುಚ್ಚಿದ್ದಾಳೆ.  ಈ ವೇಳೆ ಬೈಕ್ ಸಮತೋಲನ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಕೆಲವೇ ಕ್ಷಣ ರಸ್ತೆಯಲ್ಲಿ ಬಿದ್ದು ಸುಧಾರಿಸಿಕೊಂಡ ಯುವತಿ ಮತ್ತೆ ಎದ್ದು ತನ್ನ ಪ್ರಿಯಕರನನ್ನು ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾಳೆ. ಯುವತಿಯ ದಾಳಿಯಿಂದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಯುವಕ ಸಾವನ್ನಪ್ಪಿದ ತಕ್ಷಣವೇ ಮೃತದೇಹದ ಮುಂದೆ ಕುಳಿತ ಯುವತಿ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಸ್ನೇಹಿತರ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು,  ಯುವತಿ ಹಾಗೂ ಹತ್ಯೆಗೆ ಬಳಸಿದ ಆಯುಧ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಯುವಕನನ್ನು ಇರಿದು ಭೀಕರವಾಗಿ ಹತ್ಯೆ ಮಾಡಿದ ಬಳಿಕ ಯುವತಿ ಶಾಂತವಾಗಿದ್ದು, ಮೃತದೇಹದ ಮುಂದೆಯೇ ಕುಳಿತುಕೊಂಡಿದ್ದಳು. ತನ್ನ ಪ್ರಿಯಕರ ಪ್ರೀತಿಗೆ ಮೋಸ ಮಾಡಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆಯೇ ಆಕೆ ತೀವ್ರವಾಗಿ ಆಕ್ರೋಶಗೊಂಡಿದ್ದಳು. ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ