ಬಡವರಿಗೆ ಹೊರೆಯಾದ ಪ್ರಾಪರ್ಟಿ ಟ್ಯಾಕ್ಸ್

- ಚಂದ್ರಕಾಂತ್ ಹಿರೇಮಠ
ನಾನು ಇತ್ತೀಚೆಗೆ 2024-25ನೇ ಸಾಲಿನ ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಲು ಗ್ರಾಮ ಪಂಚಾಯಿತಿಗೆ ಹೋಗಿದ್ದೆ. ಈ ಬಾರಿ ಒಟ್ಟು ಮೊತ್ತ ರೂ. 1967 ಆಗಿದ್ದು, ನಾನು ಗೂಗಲ್ ಪೇ ಮೂಲಕ ರೂ. 1967 ಪಾವತಿಸಿ, ರಸೀದಿಯನ್ನು ಮನೆಗೆ ತಂದು ತಂದೆ–ತಾಯಿಯವರಿಗೆ ತೋರಿಸಿದೆ. ಅದನ್ನು ನೋಡಿದ ತಾಯಿಯವರು, ಕಳೆದ ವರ್ಷ ನಾವು ಕೇವಲ ರೂ. 600 ಪಾವತಿಸಿದ್ದೆವು, ಆದರೆ ಈ ವರ್ಷ ಎಷ್ಟು ಹೆಚ್ಚು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ನನಗೂ ಅಚ್ಚರಿಯ ಜೊತೆಗೆ ಆಘಾತವೂ ಆಗಿತು. ಹಳೆಯ ರಸೀದಿಗಳನ್ನು ಪರಿಶೀಲಿಸಿದಾಗ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 225% ಶೇಕಡಾ ಹೆಚ್ಚಳವಾಗಿದೆ ಎಂಬುದು ಸ್ಪಷ್ಟವಾಯಿತು.
ಈ ಬೆಳವಣಿಗೆ ಗ್ರಾಮಸ್ಥರ ಮೇಲೆ ಭಾರೀ ಆರ್ಥಿಕ ಹೊರೆ ಎಳೆಯುತ್ತಿದೆ. ಇದು, ಈ ರೀತಿ ಟ್ಯಾಕ್ಸ್ ಹೆಚ್ಚಳ ಮಾಡುತ್ತಿರುವುದು ತಂತ್ರವೋ – ಷಡ್ಯಂತ್ರವೊ ಎಂಬ ಪ್ರಶ್ನೆ ಉದ್ಭವಿಸುತ್ತಿದೆ . ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸಾಕಷ್ಟು ಹೊಂಡ, ಕೀಳುಮಟ್ಟದ ರಸ್ತೆ, ಶುದ್ಧ ಕುಡಿಯುವ ನೀರಿನ ಕೊರತೆ , ಜನರಿಗೆ ಸರ್ಕಾರಿ ಆಸ್ಪತ್ರೆಗಳ ಸೇವೆ, ಬೀದಿ ದೀಪಗಳ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೇ, ಟ್ಯಾಕ್ಸ್ ದರದಲ್ಲಿ ಇಷ್ಟು ಹೆಚ್ಚಳ ಮಾಡುವುದು ಎಷ್ಟು ನ್ಯಾಯಸಮ್ಮತ?
ಕಳೆದ ವರ್ಷವು ಕೇವಲ ರೂ. 600 ಪಾವತಿಸಿದ್ದೇ, ಆದರೆ ಈ ವರ್ಷ ಪಾವತಿಸಿದ ಹಣ 1967 ಅಂದರೆ 225% ಶೇಕಡಾ ದರ ಏರಿಕೆಯಾಗಿದೆ. ಈ ರೀತಿಯ ಹೊರೆಯು ಬಡಜನರ ಜೀವನಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ, ನಾಗರಿಕರಿಗೆ ಹೊರೆಯನ್ನು ಸೃಷ್ಟಿಸುತ್ತಿದೆ ಎಂಬುದು ನನ್ನ ಅಭಿಪ್ರಾಯ. ಜನರಿಗೆ ಮೂಲಭೂತ ಸೌಲಭ್ಯಗಳು ಕೊಡುವ ಮೊದಲು ಈ ರೀತಿಯ ತೆರಿಗೆಗಳನ್ನು ಹೆಚ್ಚಿಸುವುದು ನ್ಯಾಯಯುತವೇ?
ಸರ್ಕಾರದ ಅಭಿವೃದ್ಧಿ ಯೋಜನೆಗಳು ಗ್ರಾಮೀಣ ಭಾಗದ ಜನರ ಬದುಕಿಗೆ ನೆರವಾಗಬೇಕೇ ಹೊರತು ಹೊರೆಯನ್ನು ಹೆಚ್ಚಿಸಲು ಅಲ್ಲ. ಗ್ರಾಮದ ತೀರಾ ಸಾಮಾನ್ಯ ಕುಟುಂಬಗಳು ಪ್ರತಿ ದಿನದ ಜೀವನಾವಶ್ಯಕತೆಗಳಿಗಾಗಿ ಹೋರಾಡುತ್ತಿವೆ. ಈ ಹಿನ್ನೆಲೆಯಲ್ಲಿ, ಟ್ಯಾಕ್ಸ್ ದರದಂತಹ ಏರಿಕೆಗಳು ಅವರ ಜೀವನಶೈಲಿಗೆ ದೊಡ್ಡ ಹೊಡೆತ ನೀಡುತ್ತದೆ.
ಗ್ರಾಮ ಪಂಚಾಯಿತಿಗಳ ಇಂತಹ ನಿರ್ಧಾರಗಳು ಜನಸಾಮಾನ್ಯರ ಪಾಲಿಗೆ ಆರ್ಥಿಕ ಕಷ್ಟವನ್ನು ಹೆಚ್ಚಿಸುತ್ತಿದ್ದು, ಸರ್ಕಾರ ಜನಪರ ಯೋಜನೆಗಳಿಗೆ ಒತ್ತು ನೀಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ.
ಅಂತಿಮವಾಗಿ, ನಾಡಿನ ಬೆಳವಣಿಗೆಯನ್ನು ನೋಡಬೇಕೇ ಹೊರತು, ಬಡವರ ಬದುಕನ್ನು ಕಿತ್ತು ತಿನ್ನುವ ರೀತಿಯ ಯೋಜನೆಗಳಾಗಬಾರದು. ಗ್ರಾಮಸ್ಥರಿಗೆ ಹೊಂದುವ, ಸಾಧಾರಣ ದರದ ಟ್ಯಾಕ್ಸ್ ನಿರ್ಧಾರಗಳು ಗ್ರಾಮೀಣಾಭಿವೃದ್ಧಿ ಕೊಡುಗೆಯಾಗಿ ನೀಡಬೇಕು ಎಂಬುದು ನನ್ನ ಅಭಿಪ್ರಾಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: