ಬೆಸ್ಕಾಂ ಮಾಹಿತಿ ಆಧಾರದ ಮೇಲೆ ಆಸ್ತಿ ತೆರಿಗೆದಾರರ ಮೇಲೆ ಬರೆ ಎಳೆಯುತ್ತಿರುವ ಪಾಲಿಕೆ
ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬೆಸ್ಕಾಂ ಮಾಹಿತಿ ಆಧಾರದ ಮೇಲೆ ಆಸ್ತಿ ತೆರಿಗೆ ಮೊತ್ತವನ್ನು ಪರಿಷ್ಕರಿಸಿ,ನೋಟಿಸ್ ಜಾರಿ ಮಾಡುತ್ತಿರುವ ಕುರಿತು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರನ್ನು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು,ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಭೇಟಿ ನೀಡಿ ಮನವಿ ಸಲ್ಲಿಸಿದರು
ಬಿಬಿಎಂಪಿ ವ್ಯಾಪ್ತಿಯಲ್ಲಿನ ಹಲವಾರು ಸ್ವತ್ತುಗಳಿಗೆ ತಮ್ಮ ಆದೇಶದಂತೆ ಬೆಸ್ಕಾಂ: ಮಾಹಿತಿಯನ್ನು ಆಧರಿಸಿ, ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ನೋಟೀಸ್ ಜಾರಿ ಮಾಡಲಾಗುತ್ತಿದೆ.
ಈ ರೀತಿ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯೊಂದಿಗೆ ಆಸ್ತಿ ತೆರಿಗೆಯನ್ನು ಪಾವತಿಸಲು ಸ್ವತ್ತಿನ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗುತ್ತಿದೆ. ಸದರಿ ಸ್ವತ್ತುಗಳ ಮಾಲೀಕರುಗಳು ಈಗಾಗಲೇ ಪಾಲಿಕೆಗೆ ಪ್ರತಿ ವರ್ಷ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುತ್ತಾರೆ. ಸದರಿ ಸ್ವತ್ತುಗಳ ಪೈಕಿ ಕೆಲವೊಂದು ಸ್ವತ್ತುಗಳಲ್ಲಿ ಸಣ್ಣಪುಟ್ಟ ವಸತಿಯೇತರ ಚಟುವಟಿಕೆಗಳಿದ್ದು, ಕೋವಿಡ್-19 ಕಾರಣದಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ವಸತಿಯೇತರ ಚಟುವಟಿಕೆಗಳಲ್ಲಿ ಸ್ವತ್ತಿನ ಮಾಲೀಕರುಗಳು ಸಾಕಷ್ಟು ನಷ್ಟವನ್ನು ಅನುಭವಿಸಿರುತ್ತಾರೆ. ಅಲ್ಲದೇ, ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ.
ಈ ರೀತಿ ಸಂಕಷ್ಟದಲ್ಲಿರುವ ಕೆಲವೊಂದು ಸ್ವತ್ತಿನ ಮಾಲೀಕರುಗಳು ತಮ್ಮ ಸ್ವತ್ತುಗಳನ್ನೇ ಮಾರಾಟ ಮಾಡುವ ಪರಿಸ್ಥಿತಿಯಲ್ಲಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 100 ರಿಂದ 200 ಚ.ಅಡಿ ವಸತಿಯೇತರ ಕಟ್ಟಡಕ್ಕೆ ಸುಮಾರು 6 ವರ್ಷಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದಾಗ, ದುಪ್ಪಟ್ಟು ದಂಡ ಮತ್ತು ಬಡ್ಡಿಯೊಂದಿಗೆ ಸ್ವತ್ತಿನ ಮಾಲೀಕರು ಸುಮಾರು 1 ಲಕ್ಷದಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕಾಗಿರುವುದು ಕಂಡುಬಂದಿರುತ್ತದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವೊಂದು ಸ್ವತ್ತುಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ, ಇಂತಹ ಸ್ವತ್ತುಗಳಿಂದ ‘ಆಸ್ತಿ ತೆರಿಗೆ ವಸೂಲಾತಿಯನ್ನು ಮಾಡದೇ, ಪ್ರತೀ ವರ್ಷ ಸರಿಯಾದ ಸಮಯಕ್ಕೆ ಅಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರನ್ನೇ ಗುರಿ ಮಾಡಿ ಪರಿಷ್ಕೃತ ತೆರಿಗೆ ವಸೂಲಿ ಮಾಡುತ್ತಿರುವುದು ವಿಷಾದನೀಯವಾಗಿರುತ್ತದೆ.
ಆದುದರಿಂದ ಸದರಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ನಿಲ್ಲಿಸಿ. ಪ್ರತೀ ವರ್ಷ ಜವಾಬ್ದಾರಿಯುತವಾಗಿ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿರುವ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw