ಮಲ್ಪೆ ಬಂದರಿನಲ್ಲಿ ಮೀನು ಆಯುತ್ತಿದ್ದ ಮಕ್ಕಳ ರಕ್ಷಣೆ
ಉಡುಪಿ: ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸದಲ್ಲಿ ತೊಡಗಿದ್ದ 3 ಮಕ್ಕಳು ಹಾಗೂ ಮಗುವನ್ನು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ ಇಬ್ಬರು ತಾಯಿ ಜೊತೆ ಇದ್ದ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಯಿತು.
ಮಕ್ಕಳ ಕಲ್ಯಾಣ ಸಮಿತಿಯವರ ಆದೇಶದಂತೆ ಒಬ್ಬ ಬಾಲಕನಿಗೆ ಬಾಲಕರ ಬಾಲ ಮಂದಿರ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ ವಸತಿ ಕಲ್ಪಿಸಲಾಯಿತು. ಇಬ್ಬರು ತಾಯಿ ಮಗುವನ್ನು ಸಮಾಜ ಕಲ್ಯಾಣ ಇಲಾಖೆಯವರ ವಶಕ್ಕೆ ಒಪ್ಪಿಸಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮ್ರತಾ , ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಯೋಗೀಶ್, ಸಂದೇಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ನಯನ, ರೇಷ್ಮಾ ಪ್ರಕಾಶ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ,ನಗರ ಠಾಣಾ ಪೊಲೀಸರು ಭಾಗವಹಿಸಿದ್ದರು.