ಔರಾದ್: ಅಂಗನವಾಡಿ ನೇಮಕಾತಿ ಲೋಪ ವಿರುದ್ಧ ಪ್ರತಿಭಟನೆ
ಔರಾದ್ : ತಾಲೂಕಿನಲ್ಲಿ ಅಂಗನವಾಡಿ ನೇಮಕಾತಿಯಲ್ಲಿ ಲೋಪದೋಷಗಳಾಗಿವೆ. ಅವುಗಳನ್ನು ಸರಿಪಡಿಸುವ ಮೂಲಕ ಇನ್ನೊಮ್ಮೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಶುಕ್ರವಾರ ಸಂತಪೂರ ಶಿಶು ಅಭಿವೃದ್ಧಿ ಇಲಾಖೆಯ ಎದುರು ಪ್ರತಿಭಟನೆ ನಡೆಸಿವೆ.
ಈ ವೇಳೆ ಮಾತನಾಡಿದ ಕಾರ್ಯಕರ್ತರು ಔರಾದ್, ಕಮಲನಗರ ತಾಲೂಕಿನಲ್ಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಕಳೆದ ಜನವರಿ 12ರಂದು ಆನ್‌ಲೈನ್ ಅರ್ಜಿ ಕರೆದಿದ್ದಾರೆ. ಆದರೆ ಅಧಿಸೂಚನೆಯಲ್ಲಿ ಎಸ್ಸಿ ಉಪಜಾತಿಯ ಹೊಲಿಯಾ ಮತ್ತು ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿರುವದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಅರ್ಜಿ ಅಧಿಸೂಚನೆ ಹೊರಡಿಸಿದ್ದು, ತಾಲೂಕಿನ ತಾಂಡಗಳಲ್ಲಿ ಮಾತ್ರ ಹುದ್ದೆಗಳು ಖಾಲಿಯಿವೆ ಎಂದು ತೋರಿಸಿದ್ದಾರೆ ಎಂದು ದೂರಿದರು.
ಇಲ್ಲಿಯ ಲಂಬಾಣ ಸಮುದಾಯದ ಶಾಸಕ ಪ್ರಭು ಚವ್ಹಾಣ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ತಾಲೂಕಿನ ಗ್ರಾಮಗಳಲ್ಲಿ ನಿವೃತ್ತರಾಗಿರುವ ಸ್ಥಳದಲ್ಲಿ ತಾಂಡದ ಅಂಗನವಾಡಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿಸಿದ್ದಾರೆ. ಇದರಿಂದ ಪ್ರಸ್ತುತ ನೇಮಕಾತಿಯಲ್ಲಿ ತಾಲೂಕಿನ ತಾಂಡಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿಯಿವೆ ಎಂದು ಇಲಾಖೆಯೂ ಅಧಿಸೂಚನೆಯಲ್ಲಿ ತೋರಿಸಿದೆ ಎಂದು ಶಾಸಕ ಚವ್ಹಾಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಂಡಗಳಲ್ಲಿ ಹುದ್ದೆಗಳು ಖಾಲಿಯಿವೆ ಎಂದು ತೋರಿಸಿರುವುದು ನಿಯಮ ಬಾಹಿರವಾಗಿದೆ. ಅಲ್ಲದೇ ತಾಂಡದ ಜನರಿಗೆ ಇದರಿಂದ ಅನುಕೂಲವಾಗುತ್ತಿದೆ ಹೊರತು ಎಸ್ಸಿ ಉಪಜಾತಿಯ ಹೊಲಿಯಾ ಮತ್ತು ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕೂಡಲೇ ನಡೆಯುತ್ತಿರುವ ಈ ನೇಮಕಾತಿಯನ್ನು ರದ್ದುಪಡಿಸಬೇಕು. ಅಲ್ಲದೇ ಸರಕಾರ ನೇಮಕಾತಿಗೆ ಆದೇಶ ಹೊರಡಿಸುವ ಹಿಂದಿನ ಒಂದು ವರ್ಷದಲ್ಲಿ ನಿವೃತ್ತರಾಗಿರುವ ಸ್ಥಳಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿಯಲ್ಲಿ ಆಗಿರುವ ಲೋಪದೋಷಗಳು ಪರಿಶೀಲಿಸಿ ಇಂತಹ ಕೃತ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳ ಹಾಗೂ ಪ್ರತಿನಿಧಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು. ಸರಕಾರ ಇನ್ನೊಮ್ಮೆ ಅಧಿಸೂಚನೆ ಹೊರಡಿಸುವ ಎಲ್ಲ ಸಮುದಾಯಕ್ಕೆ ಸಮನಾಗಿ ನ್ಯಾಯ ಒದಗಿಸಿಕೊಡಬೇಕು ಆಗ್ರಹಿಸಿದರು.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷೀ ಹೆಬ್ಬಾಳಕರ್ ಅವರಿಗೆ ಬರೆದ ಮನವಿಪತ್ರವನ್ನು ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದರು. ಸಿಡಿಪಿಒ ಇಮಲಪ್ಪ, ದಸಂಸ (ಭೀಮವಾದ) ತಾಲೂಕು ಸಂಚಾಲಕ ಸಂಜೀವಕುಮಾರ ಲಾಧಾ, ದಸಂಸ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ, ದಸಂಸ ಜಿಲ್ಲಾಧ್ಯಕ್ಷ ಸತೀಶ ವಗ್ಗೆ, ಭೀಮ ಆರ್ಮಿ ತಾಲೂಕು ಅಧ್ಯಕ್ಷ ಗೌತಮ ಮೇತ್ರೆ, ಮಾರುತಿ ಜಗದಾಳೆ, ತುಕಾರಾಮ ಹಸನ್ಮುಖಿ, ಬಂಟಿ ದರಬಾರೆ, ಧನರಾಜ ಶರ್ಮಾ, ದಿಲೀಪ ಸೋನೆ, ಸುನಿಲ ಮೀತ್ರಾ, ಘಾಳೆಪ್ಪ ಶೆಂಬೆಳ್ಳಿ, ಜಗನ್ನಾಥ ನಾಗೂರೆ, ತುಕಾರಾಮ ಹೆಡಗಾಪೂರ ಸೇರಿದಂತೆ ಅನೇಕರಿದ್ದರು.
ವರದಿ: ರವಿಕುಮಾರ ಸಿಂಧೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: