ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಸಾವಿಗೆ ಶರಣಾದ ರೈತನ ಮೃತದೇಹ ಬ್ಯಾಂಕ್ ಮುಂದಿಟ್ಟು ಪ್ರತಿಭಟನೆ

ಚಿಕ್ಕಮಗಳೂರು: ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ರೈತರೊಬ್ಬರು ನಿನ್ನೆ ವಿಷ ಸೇವಿಸಿ ಸಾವನ್ನಪ್ಪಿದ್ದರು. ಇಂದು ರೈತನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ಇದೇ ವೇಳೆ, ರೈತನಿಗೆ ಕಿರುಕುಳ ನೀಡಿದ್ದ ಯೂನಿಯನ್ ಬ್ಯಾಂಕ್ ಮುಂದೆ ಮೃತದೇಹ ಸಾಗಿಸುವ ವಾಹನ ನಿಲ್ಲಿಸಿ, ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ರೈತ ಮಂಜಾನಾಯ್ಕ್ (45) ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.
ಮಂಜಾನಾಯ್ಕ್ ಯೂನಿಯನ್ ಬ್ಯಾಂಕಿನಿಂದ 4 ಲಕ್ಷದ 70 ಸಾವಿರ ಸಾಲ ಪಡೆದಿದ್ದರು. ಸಾಲ ವಸೂಲಿ ನೆಪದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಕಿರಣ್, ಗುಮಾಸ್ತ ಪಿರೋಜಿ ಆಗಾಗ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಸಾಲಕ್ಕಾಗಿ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಿ ರೈತ ಮಂಜಾನಾಯ್ಕ್ ಅವರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಸಿಬ್ಬಂದಿಯ ಕಿರುಕುಳದಿಂದ ಸಾವನ್ನಪ್ಪಿರುವ ಹಿನ್ನೆಲೆ ಮೃತದೇಹದ ಆಂಬುಲೆನ್ಸ್ ಬ್ಯಾಂಕ್ ಮುಂದೆ ನಿಲ್ಲಿಸಿ ಹಳ್ಳಿಗರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು.
ಇದೇ ವೇಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ಮನವೊಲಿಸಿ ಮೃತದೇಹದ ವಾಹನವನ್ನು ಸ್ಥಳದಿಂದ ತೆಗೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: