ಒಣಗಿದ ತರಕಾರಿ ಹಿಡಿದು ಆಕ್ರೋಶ: ಕಾವೇರಿ ನೀರನ್ನು ಬಿಡಬಾರದೆಂದು ಆಗ್ರಹ

ಚಾಮರಾಜನಗರ: ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದೆಂದು ಎಂದು ಇಂದು ಕನ್ನಡಪರ ಹೋರಾಟಗಾರರು ಒಣಗಿದ ತರಕಾರಿ, ಸೊಪ್ಪು ಹಿಡಿದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಒಣಗಿದ ವಿವಿಧ ಬಗೆಯ ತರಕಾರಿ ಹಿಡಿದು ತಮಿಳುನಾಡು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕಾವೇರಿ ನೀರನ್ನು ತಮಿಳುನಾಡಿನ 3 ಬೆಳೆಗೆ ಹರಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ಕುಡಿಯಲು ನೀರಿಲ್ಲ, ತರಕಾರಿ ಬೆಳೆಗಳು ಒಣಗುತ್ತಿವೆ, ನಮ್ಮ ರೈತರು, ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು, ನೀರು ಹರಿಸಿ ಮತ್ತೇ ಮತ್ತೇ ರೈತರನ್ನು ಸಂಕಷ್ಟಕ್ಕೆ ದೂಡಬಾರದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಗಾಯದ ಮೇಲೆ ಬರೆ ಎಳೆಯುತ್ತಿದ್ದು ವಾಸ್ತವ ಸ್ಥಿತಿ ಅರಿತು ಸಂಕಷ್ಟ ಸೂತ್ರ ಕೊಡಲಿ ಎಂದು ಹೋರಾಟಗಾರರು ಒತ್ತಾಯಿಸಿದರು.