ಪ್ರೌಢ ಶಾಲೆಯ 14 ವರ್ಷದ ವಿದ್ಯಾರ್ಥಿನಿಯನ್ನು ಮದುವೆಯಾದ ಸಂಸದ
ಚಿತ್ರಾಲ್: 14 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50 ವರ್ಷದ ಸಂಸದ ಮದುವೆಯಾದ ಘಟನೆ ಬಲೂಚಿಸ್ತಾನದಲ್ಲಿ ನಡೆದಿದ್ದು, ಈತನ ವಿರುದ್ಧ ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ದೂರು ದಾಖಲಿಸಿದೆ.
ಬಲೂಚಿಸ್ತಾನದಿಂದ ಸಂದನಾಗಿ ಆಯ್ಕೆಯಾಗಿರುವ ಮೌಲಾನಾ ಸಲಾಹುದ್ದೀನ್ ಅಯುಬಿ ಇಂತಹ ಕೃತ್ಯ ಎಸಗಿದ್ದಾನೆ. ಈತ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ತನ್ನ ಮೊಮ್ಮಗಳ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದಾನೆ.
ಬಾಲಕಿಯು ಜುಗೂರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಸುದ್ದಿ ಪಾಕಿಸ್ತಾನದ 50ಕ್ಕೂ ಅಧಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವಿದ್ಯಾರ್ಥಿನಿಯ ತಂದೆ ಇದೊಂದು ಸುಳ್ಳು ಸುದ್ದಿ. ನನ್ನ ಮಗಳಿಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ತಂದೆಯ ಹೇಳಿಕೆಯ ಹೊರತಾಗಿಯೂ ಈ ಮದುವೆಯ ಬಗ್ಗೆ ಹಲವು ದಾಖಲೆಗಳು ದೊರಕಿವೆ ಎಂದು ಹೇಳಲಾಗಿದೆ. ಇನ್ನೂ ಮಗಳಿಗೆ ಮದುವೆ ಆಗಿಲ್ಲ ಎಂದು ತಂದೆ ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂದು ಚಿತ್ರಾಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಜ್ಜಾದ್ ಅಹ್ಮದ್ ಹೇಳಿದ್ದಾರೆ.