PTCL ಕಾಯ್ದೆ: ಕಾನೂನು ಕೂಡ ದಲಿತರನ್ನು ರಕ್ಷಿಸಲಾಗುತ್ತಿಲ್ಲ!
- ಹರಿರಾಮ್ ಎ. ವಕೀಲರು
ಭಾರತ ದೇಶವು ವಿಭಿನ್ನ ಮಾನಸಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ದೇಶ, ತನ್ನದೆ ಪ್ರೆಜೆಗಳ ಮೇಲೆ ತನ್ನದೆ ಪ್ರಜೆಗಳಿಂದ ‘ಜಾತಿ’ ಎಂಬ ಅವೈಜ್ಞಾನಿಕ ಮತ್ತು ಕ್ರೂರ ವ್ಯವಸ್ಥೆಯ ಮುಖಾಂತರ ವ್ಯವಸ್ಥಿತ ವಂಚನೆ ಮತ್ತು ಶೋಷಣೆಯನ್ನು ನಡೆಸುಕೊಂಡು ಬಂದಿರುವ ಸಮಾಜವನ್ನು ಹೊಂದಿರುವ ನತದೃಷ್ಟ ದೇಶ ನಮ್ಮದು, ಅನಾಯಾಸದಿಂದ ಅಭಿವೃದ್ಧಿಶೀಲ ದೇಶವೆಂಬ ಪಟ್ಟವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು ಈ ಜಾತಿಯೆಂಬ ವೈರಸ್ ಭಾರತವನ್ನು ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟವೆಂಬ ಪಟ್ಟಿಯಲ್ಲೆ ಉಳಿಯುವಂತೆ ಮಾಡಿದೆ. ದೇಶದ ಪ್ರತಿಯೊಬ್ಬ ಪ್ರೆಜೆಯು ತನ್ನ ಮತ್ತು ದೇಶದ ಅಭಿವೃದ್ಧಿಗಾಗಿ ದೇಶದ ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣ ಮತ್ತು ಒಡೆತನವನ್ನು ಸಾಧಿಸುವುದು ಬಹಳ ಮುಖ್ಯ.
ಭಾರತದ ಮೂಲನಿವಾಸಿಗಳಾದ ದಲಿತರು ಮಾತ್ರ ಇಂದಿಗೂ ತಮ್ನದೆ ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರಾಗಿ ಬದುಕುತ್ತಿರುವುದು ಮಾತ್ರ ದುರಂತ, ಸ್ವತಂತ್ರ ಭಾರತದಲ್ಲಿ ಇನ್ನೂ ಅತಂತ್ರರಾಗಿ ಬದುಕುತ್ತಿರುವ ಇವರು ತಮ್ಮದೇ ದೇಶದಲ್ಲಿ ಇಂದಿಗೂ ಬಹಿಷ್ಕೃತರಾಗಿ ಬದುಕುತ್ತಿರುವುದು ಮಾತ್ರ ಸತ್ಯ,ತಮ್ಮ ಪೂರ್ವಿಕರ ನೆಲದಲ್ಲಿ ನೆಲವಿಲ್ಲದೆ ಇಂದಿಗೂ ಅಲೆಮಾರಿಗಳಾಗಿ ಅಲೆಯುತ್ತಿರುವದು ದುರಂತವೆ ಸರಿ,ಆಳುವ ವರ್ಗವು ತನ್ನದೇ ಪ್ರಜೆಗಳಿಗೆ ತನ್ನ ದೇಶದ ಸಂಪನ್ಮೂಲ ಮತ್ತು ಭೂಮಿಯ ಒಡೆತನವನ್ನು ನಿರಾಕರಿಸಿದೆ ಎಂದರೆ ಅದು ಅವರ ಸಾಂವಿಧಾನಿಕ ಹಕ್ಕಿನ ಜೊತೆಗೆ ಭಾರತೀಯ ನೆಂಬ ಅಸ್ಮಿತೆಯನ್ನು ನಿರಾಕರಿಸಿದೆ ಎಂದರ್ಥ. ದಲಿತರು ದೈಹಿಕ ಗುಲಾಮಗಿರಿಯಿಂದ ಸ್ವಾತಂತ್ರ್ಯಗೊಂಡಿದ್ದಾರೆ ಆದರೆ ಇಂದು ಎರಡನೆ ಬಾರಿಗೆ ದಲಿತರು ಭೌತಿಕ ಸ್ವಾತಂತ್ರ್ಯವನ್ನು ಪಡೆಯಬೇಕಿದೆ. ಯಾವುದೇ ಒಬ್ಬ ನಾಗರಿಕನ ಅಸ್ಮಿತೆ ಮತ್ತು ಸಭಲೀಕರನವು ಭೂಮಿಯ ಒಡೆತನದಿಂದ ಪ್ರಾರಂಭವಾಗುತ್ತದೆ.ಆದರೆ ಭಾರತದಲ್ಲಿ ಇಂದಿಗೂ ದಲಿತರು ಭೂಮಿ ವಂಚಿತರಾಗಿ ಬದುಕುತ್ತಿರುವುದು ಆಶ್ಚರ್ಯ.
ದಲಿತರ ಬಹುತೇಕ ಸಮಸ್ಯೆಗಳ ಮೂಲ ಅವರ ಭೂಹೀನತೆ, ಜನಗಣತಿಯ ಪ್ರಕಾರ ದಲಿತರ ಪೈಕಿ 71% ಭೂರಹಿತ ಕೂಲಿಕಾರ್ಮಿಕರಿದ್ದಾರೆ. ದೇಶದಲ್ಲಿ ಸುಮಾರು 72 ಲಕ್ಷ ಎಕರೆ ಹೆಚ್ಚುವರಿ ಭೂಮಿಯಿದ್ದರು ದಲಿತರ ಬಳಿ ಮಾತ್ರ ಭೂಮಿ ಇಲ್ಲದಿರುವುದು ವಿಪರ್ಯಾಸವೆ ಸರಿ ! 2015 ರ ಕೃಷಿ ಜನಗಣತಿ ಪ್ರಕಾರ ದೇಶದಲ್ಲಿ 62% ಜನರ ಬಳಿ ಒಂದು ಹೆಕ್ಟೇರ್ ಗಿಂತ ಕಡಿಮೆ ಭೂಮಿಯ ಮಾಲಿಕತ್ವ, 19% ಜನರ ಬಳಿ 1 ರಿಂದ 2 ಹೆಕ್ಟೇರ್ ಭೂಮಿಯ ಒಡೆತನ, 12% ಜನರ ಬಳಿ 2 ರಿಂದ 4 ಹೆಕ್ಟೇರ್ ಭೂಮಿಯ ಒಡೆತನ, 6% ಜನರ ಬಳಿ 4 ರಿಂದ 10 ಹೆಕ್ಟೇರ್ ಭೂಮಿಯ ಒಡೆತನವಿದ್ದರೆ ಇನ್ನು 1% ಜನರ ಬಳಿ 10 ಹೆಕ್ಟೇರ್ ಭೂಮಿಗಿಂತ ಹೆಚ್ಚು ಒಡೆತನವಿದೆ. ಇದೆ ಕೃಷಿ ಜನಗಣತಿಯ ಪ್ರಕಾರ ರಾಷ್ಟ್ರ ಮಟ್ಟದಲ್ಲಿ ಕೇವಲ 11.8 % ಪರಿಶಿಷ್ಟ ಜಾತಿಗಳ ಕೈಯಲ್ಲದ್ದರೆ ಇನ್ನು 8.7% ಪರಿಶಿಷ್ಟ ಪಂಗಡಗಳ ಕೈಯಲ್ಲಿದೆ, ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, 6.4% ಪರಿಶಿಷ್ಟ ಜಾತಿಗಳ ಒಡೆತನವಿದ್ದರೆ, 7.1% ಪರಿಶಿಷ್ಟ ವರ್ಗಗಳ ಒಡೆತನದಲ್ಲಿದೆ, ಆದರೆ ಇತರರ ಭೂಮಿ ಒಡೆತನವು 79.21% ರಷ್ಟಿದೆ.
ದಲಿತರು ಸಂಪತ್ತನ್ನು ಹೊಂದಬಾರದು ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ, ಒಂದೊಮ್ಮೆ ಅದನ್ನು ಉಲ್ಲಂಘಿಸಿದರೆ ಅದಕ್ಕೆ ಕಠಿಣ ಶಿಕ್ಷೆಯ ಜೊತೆಗೆ ಆಸ್ತಿಯ ಮುಟ್ಟುಗೋಲಿನ ಶಿಕ್ಷೆಯನ್ನು ವಿಧಿಸಲಾಗುತಿತ್ತು, ದೇಶದಲ್ಲಿ ಆಳ್ವಿಕೆಗಳು ಬದಲಾದರು ದಲಿತರ ಪರಿಸ್ಥಿತಿಗಳು ಮಾತ್ರ ಬದಲಾಗಲಿಲ್ಲಾ, ಸಂಪತ್ತನ್ನು ದಲಿತರು ಹೊಂದಬಾರದು ಎನ್ನುವ ಮನುವಾದವನ್ನು ದಿಕ್ಕರಿಸಿ ಮೊಟ್ಟಮೊದಲನೆಯ ಬಾರಿಗೆ 1924 ರಲ್ಲಿ ಮೈಸೂರಿನ ಅರಸರು ದಲಿತರಿಗೆ ಭೂಮಿಯ ಒಡೆತನವನ್ನು ನೀಡಿದರು, ಸ್ವಾತಂತ್ರ್ಯದ ನಂತರ ರೂಪಗೊಂಡ ಹೊಸ ಸಂವಿಧಾನವು ಕೂಡ ತನ್ನ ಪೀಠಿಕೆ ಮತ್ತು ಭಾಗ IV ರ , ಅನುಚ್ಛೇದ 39(b) ಮತ್ತು ಅನುಚ್ಛೇದ 46 ರಂತೆ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಇತರೆ ದುರ್ಬಲ ವರ್ಗದ ಜನರ ಶೋಷಣೆಯನ್ನು ತಡೆಗಟ್ಟಲು ಮತ್ತು ಅವರಿಗೆ ಆರ್ಥಿಕ ನ್ಯಾಯವನ್ನು ಒದಗಿಸಲು ರಾಜ್ಯವು ಭೂಮಿಯನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಹಂಚುವ ಅವಕಾಶವನ್ನು ಕಲ್ಪಿಸಿದೆ, ಸಂವಿಧಾನದ ಆಶಯಗಳಂತೆ ಸಾಮಾಜಿಕ ನ್ಯಾಯ ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿ ಮಾಡಲು ಅನೇಕ ಭೂ ಸುಧಾರಣೆ ಕಾಯ್ದೆಗಳನ್ನು ಜಾರಿ ಮಾಡಲಾಯಿತು, 1978 ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜು ಅರಸರು ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆಯಾದ The Karnataka SC and ST ( Prohibition of Transfer of Certain Lands) Act, 1978 (PTCL ) ನ್ನು ದಿನಾಂಕ 01.01.1979 ರಂದು ಜಾರಿಗೆ ತಂದರು. ಈ ಕಾಯ್ದೆಯ ಮುಖ್ಯ ಉದ್ದೇಶವು ದಲಿತರ ಅಸ್ಪೃಶ್ಯತೆ, ಅನಕ್ಷರತೆ,ಬಡತನ, ನಿರುದ್ಯೋಗದ ನಿವಾರಣೆಯ ಜೊತೆಗೆ ಈ ಸಮುದಾಯದಗಳನ್ನು ಮುಖ್ಯ ವಾಹಿನಿಗೆ ತರುವುದು.
ದಲಿತರಿಗೆ ಸರ್ಕಾರಗಳು ಭೂಮಿಯನ್ನು ನೀಡಿದ್ದರು, ಅವರ ಅನಕ್ಷರತೆ ಮತ್ತು ಬಡತನವನ್ನು ಬಂಡವಾಳ ವನ್ನಾಗಿಸಿಕೊಂಡ ಕೆಲ ಶ್ರೀಮಂತರು ಮತ್ತು ಬಲಿಷ್ಠರು ಅವರ ಭೂಮಿಯನ್ನು ವಂಚನೆ, ಮೋಸ ಮತ್ತು ಬಲವಂತದಿಂದ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅವರನ್ನು ಮತ್ತೆ ಭೂ ವಂಚಿತರನ್ನಾಗಿಸುತ್ತಿದ್ದರು ಹಾಗೆಯೇ ಮತ್ತೊಂದಷ್ಟು ಜನ ಬಿಡಿಗಾಸಿಗೆ ಭೂಮಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತಿದ್ದರು ಹಾಗಾಗಿ ಈ ಸಮುದಾಯಗಳನ್ನು ಈ ಶೋಷಣೆಯಿಂದ ಮುಕ್ತಿಗೊಳಿಸಲು ಜಾರಿತಂದದ್ದೆ ಈ PTCL ಕಾಯ್ದೆ. ಈ ಕಾಯ್ದೆಯ ಅನ್ವಯ, ಜಮೀನು ಪರಭಾರೆ ಮಾಡಿದ ಮೂಲ ಮಂಜೂರುದಾರ ಅಥವಾ ಅವನ ವಾರಸ್ಸುದಾರರು ಕಾಯ್ದೆಯ ಕಲಂ 5 ರ ಅಡಿಯಲ್ಲಿ ಅರ್ಜಿಯನ್ನು ಸಂಬಂಧಿಸಿದ ಉಪವಿಭಾಗಾಧಿಕಾರಿಗಳಿಗೆ ನಮೂನೆ II ರಲ್ಲಿ ಅರ್ಜಿ ಸಲ್ಲಿಸಿ, ಜಮೀನು ದರಖಾಸ್ತು ಮುಲಕ ಪರಭಾರೆ ನಿಬಂಧನೆಗೆ ಒಳಪಟ್ಟಿದ್ದು, ಈ ಪರಭಾರೆಯು ಅವಧಿಯೊಳಗೆ ಅಂದರೆ ಮಾರಟ, ಕರಾರು, ಭೋಗ್ಯ, ಒಪ್ಪಂದ ಇತ್ಯಾದಿ, ಈ ಅಧಿನಿಯಮವು ಜಾರಿಗೆ ಬರುವ ಹಿಂದಿನ ಮತ್ತು ಜಾರಿಗೆ ಬಂದ ನಂತರ (ಅಧಿನಿಯಮ 4) ಸರ್ಕಾರದ ಪೂರ್ವಾನುಮತಿ ಪಡೆಯದೆ ಪರಭಾರೆ ಮಾಡಿದ್ದರೆ ಅಂತಹ ಜಮೀನುಗಳನ್ನು ಹಿತಾಸಕ್ತಿ ಉಳ್ಳವರು ಅಥವಾ ಸರ್ಕಾರದ ದಾಖಲೆ ಪಡೆದು ಅದರ ಮೂಲಕ ವಿಚಾರಣೆ ಮಾಡಿ ಮೂಲ ಮುಂಜೂರೂರುದಾರರಿಗೆ ವಾಪಸು ಬಿಡಿಸಿಕೊಡುವುದು, ಈ ಕಾಯ್ದೆಯ ಪ್ರಕಾರ ಕಾಯ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಜಮೀನು ಪರಾಭಾರೆ ಆಗಿದ್ದರೆ ಉಪವಿಭಾಗಾಧಿಕಾರಿಯು Suo Moto ಕೇಸು ದಾಖಲಿಸಿ ಜಮೀನನ್ನು ಮೂಲ ಮಂಜೂರುದಾರರಿಗೆ ಕೊಡಿಸ ಬಹುದು. ಕಲಂ 6 ರಂತೆ ದಲಿತರಿಗೆ (SC/ST) ಗಳಿಗೆ ಮಂಜೂರಾದ ಜಮೀನುಗಳ ಪಟ್ಟಿಯನ್ನು ಉಪನೊಂದಾಣೆ ಅಧಿಕಾರಿಗಳಿಗೆ ಕಳಿಸುವುದು ಅಧಿಕಾರಿಗಳ ಶಾಸನಬದ್ಧ ಕರ್ತವ್ಯ ಹಾಗು ಪಟ್ಟಿಯಲ್ಲಿ ಇರುವ ಜಮೀನು ಪರಭರೆಗೆ ಬಂದಂತ ಸಂದರ್ಭದಲ್ಲಿ ಉಪನೊಂದಾಣೆ ಅಧಿಕಾರಿಯು ಪರಿಶೀಲಿಸಿ ಕಾನೂನು ಬದ್ದವಾಗಿ ಪರಭಾರೆ ಮಾಡತಕ್ಕದ್ದು PTCL ಕಾಯ್ದೆಯ ಉಲ್ಲಂಘನೆ ಕಂಡಲ್ಲಿ ಪರಭಾರೆ ತಡೆಹಿಡಿಯ ಬೇಕು ಆದರೆ ಇಲ್ಲಿಯ ವರೆಗೂ ಒಬ್ಬ ಒಬ್ಬ ನೊಂದಾಣೆ ಅಧಿಕಾರಿಯು ಈ ಕೆಲಸವನ್ನು ಮಾಡದೆ ಬಲಿಷ್ಠರ ಪರ ನಿಂತು ದಲಿತರ ಭೂಮಿಯನ್ನು ಕಬಳಿಸಲು ಸಹಾಯ ಮಾಡಿದ್ದಾರೆ. ಕಾಯ್ದೆಯ ಕಲಂ 8 ರ ಪ್ರಕಾರ ಕಾಯ್ದೆಯ ಉಲ್ಲಂಘನೆ ಮಾಡಿದಲ್ಲಿ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ಅಥವಾ/ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಹಾಗೆಯೇ ಕಲಂ 11 ರ ಪ್ರಕಾರ ಇದು ವಿಶೇಷ ಕಾಯ್ದೆ ಯಾಗಿದ್ದು ಯಾವ ಕಾಯ್ದೆಗಳು ಇದನ್ನು ಮೀರುವ ಹಾಗಿಲ್ಲಾ ಜೊತೆಗೆ ಈ ಕಾಯ್ದೆಯು ವಿಶೇಷ ಕಾಯ್ದೆಯಾಗಿರುವುದರಿಂದ ಇದಕ್ಕೆ ಸಾಮಾನ್ಯ ಕಾಯ್ದೆಗೆ ಅನ್ವಯಿಸುವ ಕಲಾಮಿತಿ ಅನ್ವಯಿಸುವುದಿಲ್ಲ.
ಶಾಸನಬದ್ದವಾಗಿ ರೂಪಿತಗೊಂಡ PTCL ಕಾಯ್ದೆಯನ್ನು ವಿಫಲಗೊಳಿಸಿ ದಲಿತರ ಭೂಮಿಯ ಹಕ್ಕನ್ನು ಕಸಿದುಕೊಂಡಿದೆ, ಆಶ್ಚರ್ಯವೆಂದರೆ ‘Reasonable Time ‘ ಎಂದರೆ ಎಷ್ಟು ಎಂಬುದನ್ನು ಈ ತೀರ್ಪಿನಲ್ಲಿ ನ್ಯಾಯಾದೀಶರು ಉಲ್ಲೇಖಿಸಿಲ್ಲಾ, ವಿಪರ್ಯಾಸವೆಂದರೆ ಇದರ ವಿರುದ್ಧ ನಮ್ಮ ಸರ್ಕಾರವು ಯಾವುದೆ Review Petition ಹಾಕದೆ ಈ ಕಾಯ್ದೆಯನ್ನು ಕೊಂದು ಹಾಕಿದ್ದಾರೆ, ವಿಪರ್ಯಾಸವೆಂದರೆ ಕಾಯ್ದೆಯನ್ನು ಉಲ್ಲಂಘಿಸಿ ದಲಿತರ ಭೂಕಬಳಿಕೆಗೆ ಸಹಕರಿಸಿದ AC, DC, ನೊಂದಾಣೆ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ಶಿಕ್ಷೆ ಕೊಡುವ ಬದಲಾಗಿ ಸರ್ಕಾರ ಮತ್ತು ನ್ಯಾಯಾಲಯಗಳು ಅನಕ್ಷರಸ್ಥ ದಲಿತರ ಬದುಕಿಗೆ ಕೊಳ್ಳಿ ಹಚ್ಚಿ ಬೀದಿ ತಳ್ಳಿದ್ದಾರೆ, ನೆಕ್ಕಂಟಿ ರಾಜಲಕ್ಷ್ಮಿಯ ಪ್ರಕರಣದ ನಂತರ ಎಲ್ಲಾ ಹಂತದ ಕೋರ್ಟುಗಳಲ್ಲೂ ಸಾವಿರಾರು ಪ್ರಕರಣಗಳಲ್ಲಿ ಮಂಜೂರುದಾರರ ವಿರುದ್ಧವಾಗಿ ತೀರ್ಪುಗಳು ಬಂದಿದ್ದು ಸಾವಿರಾರು ಎಕರೆ ಜಮೀನನ್ನು ದಲಿತರು ಶಾಶ್ವತವಾಗಿ ಕಳೆದುಕೊಂಡಿದ್ದಾರೆ, ಇನ್ನೂ ಸುಮಾರು 70,000 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು ನ್ಯಾಯದ ನಿರೀಕ್ಷೆಯಲ್ಲಿ ಸಾವಿರಾರು ಅರ್ಜಿದಾರರು ಕಾಯುತಿದ್ದಾರೆ.
ದಲಿತರಿಂದ ಭೂಮಿಯನ್ನು ಮೋಸದಿಂದ ಕಬಳಿಸಿರುವು ಬಹುತೇಕರು ರಾಜಕಾರಣಿಗಳಾಗಿರುವ ಕಾರಣ ಇಂದಿಗೂ ಶಾಸನ ಸಭೆಯಲ್ಲಿ ಇದರ ಬಗ್ಗೆ ಯಾವುದೆ ಚರ್ಚೆಗಳು ನಡೆದಿಲ್ಲ, ಆದರೂ ಭೂಮಿಯನ್ನು ಕಳೆದುಕೊಂಡಿರುವ ಬಾಧಿತರು ಸುಮಾರು 6 ತಿಂಗಳುಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನರ್ದಿಷ್ಟ ಕಾಲ ಧರಣಿ ಕೂತಿದ್ದು ಅನೇಕ ಹೋರಾಟಗಾರರು ಮತ್ತು ಕೆಲ ಶಾಸಕರ ಪ್ರಯತ್ನದಿಂದ PTCL ಕಾಯ್ದೆಯ ತಿದ್ದುಪಡಿಗಾಗಿ ನೆಡೆದ ಹೋರಾಟದ ಪ್ರತಿಫಲವಾಗಿ ಸೆಪ್ಟೆಂಬರ್ 2021 ರಲ್ಲಿ ಕರ್ನಾಟಕ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು PTCL ಕಾಯ್ದೆಯ ತಿದ್ದುಪಡಿಗಾಗಿ ವರದಿಯನ್ನು ಸಲ್ಲಿಸಿದೆ ಆದರೆ ಅದು ಏನಾಗಿದೆ ಎಂದು ಇಂದಿಗೂ ಯಾವ ಮಾಹಿತಿಯು ಇಲ್ಲಾ, ಚುನಾವಣಾ ಪೂರ್ವದಲ್ಲಿ ಇಂದಿನ ರಾಜ್ಯದ ಮುಖ್ಯ ಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯ ನವರು, ಉಪ-ಮುಖ್ಯಮಂತ್ರಿಯಾದ ಶ್ರೀ ಡಿ ಕೆ ಶಿವಕುಮಾರ್ ಹಾಗು ಸಮಾಜ ಕಲ್ಯಾಣ ಸಚಿವರಾದ ಎಚ್ ಸಿ ಮಹಾದೇವಪ್ಪ ರವರು ಧರಣಿ ಸ್ಥಳಕ್ಕೆ ಬಂದು ತಾವು ಅಧಿಕಾರಕ್ಕೆ ಬಂದರೆ ಆದ್ಯತೆಯ ಮೇರೆಗೆ ಸಮಸ್ಯೆಯನ್ನು ಬಗೆಹರಿಸುತ್ತೆವೆ ಎಂದು ಆಶ್ವಾಸನೆಯನ್ನು ನೀಡಿದ್ದರು ಹಾಗು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಕೂಡ ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ಮೊದಲನೆಯ ಸಂಪುಟ ಸಭೆಯಲ್ಲಿ PTCL ಕಾಯ್ದೆಯ ತಿದ್ದುಪಡಿಯನ್ನು ಅಂಗೀಕರಿಸುತ್ತೇವೆ ಎಂದು ಹೇಳಿದ್ದರು, ಆದರೆ ಸರ್ಕಾರವು ಬಂದಿದ್ದಾಯ್ತು, ಸಂಪುಟ ಸಭೆಗಳು ನಡೆದು ಹೋದವು ಆದರೆ ಇಲ್ಲಿಯ ವರೆಗೂ PTCL ಕಾಯ್ದೆಯ ತಿದ್ದುಪಡಿಯ ಬಗ್ಗೆ ಯಾವುದೆ ತೀರ್ಮಾನ ತೆಗೆದುಕೊಂಡಿಲ್ಲಾ. ಕಾಂಗ್ರೆಸ್ ಸರ್ಕಾರವು ತಮ್ಮ ದಲಿತರ ಪರ ಬದ್ಧತೆಯನ್ನು ಪ್ರದರ್ಶನ ಮಾಡುವ ಸಮಯ ಬಂದಿದೆ, ಇನ್ನೂ ಯಾಕೆ ಅವರು ತಡಮಾಡುತಿದ್ದಾರೋ ಗೊತ್ತಿಲ್ಲಾ, ತಮ್ಮ ಸರ್ಕಾರದ ಶಾಸಕರ ಮತ್ತು ಮಂತ್ರಿಗಳ ಒತ್ತಡವೇನಾದರು ಇದೆಯೇನೋ ಮಾನ್ಯ ಮುಖ್ಯ ಮಂತ್ರಿಗಳೆ ಹೇಳ ಬೇಕು.
ನಮ್ಮ ದೇಶವು ಕೃಷಿ ಪ್ರಧಾನವು ಹೌದು ಜಾತಿ ಪ್ರಧಾನವೂ ಹೌದು ! ಆದರೆ ಇಂದು ನಮಗೆ ಅವಶ್ಯವಿರುವುದು ಸಂವಿಧಾನದ ಆಶಯಗಳು ಮತ್ತು ಸಾಮಾಜಿಕ ಬದಲಾವಣೆ, ದೇಶದ ಅಭಿವೃದ್ಧಿಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಚಲನಶೀಲತೆಯಿಂದ ಮಾತ್ರ ಸಾಧ್ಯ, ಯಥಾಸ್ಥಿತಿವಾದವು ಎಂದಿಗೂ ಯಾವುದೇ ಸಮಾಜ ಅಥವಾ ದೇಶವನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲಾ. ದಲಿತರ ಎಲ್ಲಾ ಸಮಸ್ಯೆಗಳ ಮೂಲ ತಮ್ಮ ಆರ್ಥಿಕ ಹಿಂದುಳುವಿಕೆಯಲ್ಲಿ ಅಡಗಿದೆ ಹಾಗಾಗಿ ಈ ಸಮುದಾಯಗಳು ಆರ್ಥಿಕವಾಗಿ ಸಬಲರಾಗಲು ಭೂ ಸುಧಾರಣೆಯು ಅತ್ಯವಶ್ಯ, ದುರಂತವೆಂದರೆ, ಇವರ ಪರ ಇರುವ ಕಾನೂನು ಕೂಡ ಇವರನ್ನು ರಕ್ಷಿಸಲಾಗುತ್ತಿಲ್ಲ!
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw