ಸಾವರ್ಕರ್ ಬ್ಯಾನರ್ ತೆರವುಗೊಳಿಸುವ ಪುಂಡಾಟ ನಿಲ್ಲಿಸದಿದ್ದರೆ ತಕ್ಕ ಶಾಸ್ತಿ: ಕುಯಿಲಾಡಿ

savarkar
17/08/2022

ಉಡುಪಿಯ ಬ್ರಹ್ಮಗಿರಿ ವೃತ್ತದ ಬಳಿ ದೇಶ ಭಕ್ತರು ಅಳವಡಿಸಿರುವ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಾವರ್ಕರ್ ರವರ ಬ್ಯಾನರನ್ನು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ಪಾಪದ ಕೂಸು ಎಸ್ ಡಿಪಿಐ ಸೇರಿ ತೆರವುಗೊಳಿಸುವ ಹುನ್ನಾರದ ಬಗ್ಗೆ ತಿಳಿದುಬಂದಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎರಡೆರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿ ಛಲ ಬಿಡದ ಹೋರಾಟದಿಂದ ದೇಶಕ್ಕಾಗಿ ಹುತಾತ್ಮರಾದ ಅಪ್ಪಟ ದೇಶ ಭಕ್ತ ಸಾವರ್ಕರ್ ರವರ ಹೆಸರೆತ್ತಲೂ ಕಾಂಗ್ರೆಸ್ ಗೆ ಯೋಗ್ಯತೆ ಇಲ್ಲ. ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ದಕ್ಕಿರುವ ಸ್ವಾತಂತ್ರ್ಯವನ್ನು ಸುದೀರ್ಘ ಅವಧಿಗೆ ದುರಾಡಳಿತದ ಮೂಲಕ ಬೇಕಾಬಿಟ್ಟಿ ದುರುಪಯೋಗಪಡಿಸಿ ಕೊಂಡಿರುವ ಕಾಂಗ್ರೆಸ್ ಗೆ ವಿನಾಯಕ ದಾಮೋದರ್ ಸಾವರ್ಕರ್ ರಂತಹ ಅಪ್ಪಟ ದೇಶ ಭಕ್ತರ ತಾಕತ್ತು ತಿಳಿದುಕೊಳ್ಳುವ ಯೋಗ್ಯತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಸದಾ ಗೊಂದಲದ ವಾತಾವರಣ ಸೃಷ್ಟಿಸಲು ದೇಶವಿರೋಧಿ ಮತಾಂಧ ಸಂಘಟನೆಯಾದ ಎಸ್ಡಿಪಿಐ ಯೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್ ನ ದೇಶ ವಿದ್ರೋಹಿ ಕೃತ್ಯಗಳು ಈಗಾಗಲೇ ಹಲವಾರು ಸನ್ನಿವೇಶಗಳಲ್ಲಿ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನ ತಾಳಕ್ಕೆ ಕುಣಿಯುವ ಎಸ್ಡಿಪಿಐ ಇದೀಗ ಸಮಾಜದಲ್ಲಿ ಅಶಾಂತಿ ಮೂಡಿಸುವ ಸಲುವಾಗಿ ಉಡುಪಿಯ ಬ್ರಹ್ಮಗಿರಿಯಲ್ಲಿ ಸಾವರ್ಕರ್ ಬ್ಯಾನರ್ ತೆರವುಗೊಳಿಸುವ ಕುಕೃತ್ಯದಲ್ಲಿ ತೊಡಗಿ ಪುಂಡಾಟ ನಡೆಸಲು ಯತ್ನಿಸಿದರೆ ತಕ್ಕ ಶಾಸ್ತಿ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.

ದೇಶ ಭಕ್ತರ ಅಪಮಾನವನ್ನು ಬಿಜೆಪಿ ಎಂದಿಗೂ ಸಹಿಸದು. ಸ್ವಾತಂತ್ರ್ಯ ಸೇನಾನಿಗಳ ಅವಹೇಳನಕ್ಕೆ ಯಾವ ಬೆಲೆ ತೆತ್ತಾದರೂ ತಕ್ಕ ಉತ್ತರ ನೀಡಲು ಬಿಜೆಪಿ ಕಾರ್ಯಕರ್ತರು ಸದಾ ಸನ್ನದ್ಧರಾಗಿದ್ದಾರೆ. ಅಗತ್ಯ ಬಿದ್ದರೆ ‘ಒಂದು ಬ್ಯಾನರ್ ಬದಲಿಗೆ ನೂರಾರು ಬ್ಯಾನರ್ ಅಭಿಯಾನ’ಕ್ಕೆ ಜಿಲ್ಲಾ ಬಿಜೆಪಿ ಚಾಲನೆ ನೀಡಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version