ಪೊಲೀಸ್ ಠಾಣೆಯಿಂದ 100 ಮೀ. ದೂರದಲ್ಲಿ ಬಸ್ಸಿನಲ್ಲೇ ಮಹಿಳೆ ಮೇಲೆ ಅತ್ಯಾಚಾರ!

ಪುಣೆ: ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ ನೊಳಗೆ 26 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಮಂಗಳವಾರ ಬೆಳಗಿನ ಜಾವ ಪುಣೆಯ ಜನನಿಬಿಡ ಪ್ರದೇಶ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ದತ್ತಾತ್ರೇಯ ರಾಮದಾಸ್(36) ಎಂಬಾತ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ಕೃತ್ಯ ನಡೆಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯ ಬಂಧನಕ್ಕಾಗಿ ಪೊಲೀಸರು 8 ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಆರೋಪಿ ರಾಮ್ ದಾಸ್ ಈಗಾಗಲೇ ಕ್ರಿಮಿನಲ್ ಹಿನ್ನಲೆ ಹೊಂದಿದ ವ್ಯಕ್ತಿಯಾಗಿದ್ದಾನೆ.
ಘಟನೆಯ ವಿವರ:
26 ವರ್ಷದ ಯುವತಿ ಗೃಹಿಣಿಯಾಗಿದ್ದು, ಸತಾರಾ ಜಿಲ್ಲೆಯ ತನ್ನ ಸ್ವಂತ ಗ್ರಾಮವಾದ ಫಾಲ್ಟನ್ ಗೆ ಪ್ರಯಾಣಿಸುತ್ತಿದ್ದಳು. ಬೆಳಿಗ್ಗೆ 5.45 ರಿಂದ ಬೆಳಿಗ್ಗೆ 6.30 ನಡುವೆ ಆರೋಪಿ ರಾಮ್ ದಾಸ್ ಮಹಿಳೆಯ ಜೊತೆಗೆ ಮಾತನಾಡಿದ್ದು, ದೀದಿ(ಸಹೋದರಿ) ಎಂದು ಸಂಬೋಧಿಸಿ ಗೌರವಯುತ ವ್ಯಕ್ತಿಯಂತೆ ನಟಿಸಿದ್ದಾನೆ. ಬಳಿಕ ಊರಿಗೆ ತೆರಳುವ ಬಸ್ ಎಂದು ನಿಲ್ಲಿಸಿದ್ದ ಬಸ್ ನ್ನು ತೋರಿಸಿ ಕರೆದೊಯ್ದಿದ್ದಾನೆ. ಈ ವೇಳೆ ಮಹಿಳೆ ಈ ಬಸ್ ನಲ್ಲಿ ಲೈಟ್ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ ವೇಳೆ, ಇತರ ಪ್ರಯಾಣಿಕರು ಮಲಗಿದ್ದಾರೆ ಹಾಗಾಗಿ ಲೈಟ್ ಆರಿಸಲಾಗಿದೆ ಎಂದಿದ್ದಾನೆ. ಇದನ್ನು ನಂಬಿ ಮಹಿಳೆ ಬಸ್ ಏರಿದ ವೇಳೆ, ಏಕಾಏಕಿ ಬಸ್ ನೊಳಗೆ ಹಾರಿದ ಆರೋಪಿ ಬಸ್ ನ ಡೋರ್ ಲಾಕ್ ಮಾಡಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಆರೋಪಿಯು ನೊಂದ ಮಹಿಳೆಯೊಂದಿಗೆ ಮಾತನಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣವೇ ಮಹಿಳೆ ತನ್ನ ಸ್ನೇಹಿತರ ಸಹಾಯದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಾದ ತಕ್ಷಣವೇ ಪೊಲೀಸರು ತಕ್ಷಣ ತನಿಖೆ ಆರಂಭಿಸಿದೆ. ಬಸ್ ನಲ್ಲಿ ಇಂತಹ ಘಟನೆ ಹೇಗೆ ನಡೆಯಿತು ಮತ್ತು ಬಸ್ ನ ಮಾಲಿಕರು ಇಂತಹ ಕೃತ್ಯಕ್ಕೆ ಹೇಗೆ ಅವಕಾಶಕೊಟ್ಟರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ಅಂತರದಲ್ಲೇ ಈ ಘಟನೆ ನಡೆದಿರುವುದು ಪೊಲೀಸರಿಗೆ ಸವಾಲಿನ ಪ್ರಕರಣವಾಗಿ ಪರಿಣಮಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: