ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಪುನೀತ್ ಕೆರೆಹಳ್ಳಿ ಆ್ಯಂಡ್ ಗ್ಯಾಂಗ್
ಮಂಡ್ಯದ ವಾಹನ ಚಾಲಕ ಇದ್ರೀಸ್ ಪಾಶ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಇಷ್ಟು ದಿನ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಅವನೊಂದಿಗೆ ಇದ್ದ ನಾಲ್ವರು ಸಹಚರರನ್ನು ಸಹ ಬಂಧಿಸಲಾಗಿದೆ.
ಮಾರ್ಚ್ 31ರ ರಾತ್ರಿ ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ವಾಹನ ಚಾಲಕ ಇದ್ರೀಸ್ ಪಾಶ ಹತ್ಯೆಯಾಗಿದ್ದರು. ಈ ಕುರಿತು ಪುನೀತ್ ಕೆರೆಹಳ್ಳಿ ಮೇಲೆ ಎಫ್ ಐಆರ್ ದಾಖಲಾಗಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಪ್ರಕರಣ ದಾಖಲಿಸಿದ್ದರು. ಆದರೆ ಅಂದಿನಿಂದ ತಲೆ ಮರೆಸಿಕೊಂಡಿದ್ದ ಅವರು ಸೋಮವಾರ ರಾತ್ರಿ ಫೇಸ್ ಬುಕ್ ಲೈವ್ ಬಂದು ನಾನು ಕೊಲೆ ಮಾಡಿಲ್ಲ ಎಂದಿದ್ದರು.
ಪ್ರಕರಣದ ಕುರಿತು ಪತ್ರಿಕಾಗೋಷ್ಟಿ ನಡೆಸಿದ್ದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿಯವರು, “ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದು, ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ” ಎಂದು ಹೇಳಿದ್ದರು.
ಮಾರ್ಚ್ 27 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ತೆಂಡೇಕೆರೆ ದನದ ಸಂತೆಯಲ್ಲಿ ಖರೀದಿಸಿದ ರಾಸುಗಳನ್ನು ಮಾರ್ಚ್ 31 ರ ರಾತ್ರಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂತೆಗಳಿಗೆ ಕೊಂಡೊಯ್ಯುತ್ತಿರುವಾಗ ಅವರನ್ನು ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ತಡೆದಿದೆ. 2 ಲಕ್ಷ ಹಣ ಕೊಟ್ಟರೆ ಗಾಡಿ ಬಿಡುತ್ತೇನೆ, ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಇದ್ರಿಶ್ ಪಾಶ ಸೇರಿ ಅವರ ಜೊತೆಗಿದ್ದ ಇರ್ಫಾನ್ ಮತ್ತು ಸೈಯ್ಯದ್ ಜಹೀರ್ ಎಂಬುವವರಿಗೆ ಬೆದರಿಕೆಯೊಡ್ಡಿದ್ದಾರೆ.
ಆದರೆ ಇದ್ರಿಶ್ ಪಾಶ ರಾಸುಗಳನ್ನು ಖರೀದಿಸಿದ ರಶೀದಿಗಳನ್ನು ತೋರಿಸಿ ನಾವು ಕಾನೂನು ಬದ್ಧವಾಗಿ ಖರೀದಿಸಿದ ಗೋವುಗಳನ್ನು ಸಾಗಾಟ ಮಾಡುತ್ತಿದ್ದೇವೆ, ನಿಮಗೆ ಏಕೆ ಹಣ ಕೊಡಬೇಕೆಂದು ವಾದಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಪುನೀತ್ ಕೆರೆಹಳ್ಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಇದ್ರಿಶ್ ಪಾಶ, ಇರ್ಫಾನ್ ಮತ್ತು ಸಯ್ಯದ್ ಜಹೀರ್ ಮೇಲೆ ತೀವ್ರ ಹಲ್ಲೆ ನಡೆಸಿದೆ.
ಗಲಾಟೆಯಲ್ಲಿ ಇರ್ಫಾನ್ ತಪ್ಪಿಸಿಕೊಂಡು ಓಡಿದರೆ, ಸಯ್ಯದ್ ಅಂಗಡಿಯ ಬಳಿ ಅವಿತುಕೊಂಡಾಗ ಸಿಕ್ಕಿಬಿದ್ದಿದ್ದಾರೆ. ಆದರೆ ಇದ್ರೀಸ್ ತಪ್ಪಿಸಿಕೊಳ್ಳಲು ಯತ್ನಿಸುವಾಗ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ಎಲೆಕ್ಟ್ರಿಕ್ ಗನ್ ರೀತಿಯ ಸಾಧನದಿಂದ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಅದು ಮಿತಿ ಮೀರಿದ್ದರಿಂದ ಇದ್ರಿಶ್ ಪಾಶ ಜೀವ ಬಿಟ್ಟಿದ್ದಾರೆ. ಅವರಿಗೆ ನೀಡಿದ ಕಿರುಕುಳದ ಮಾರ್ಕ್ಗಳು ಇದ್ರೀಶ್ ದೇಹದ ಮೇಲಿರುವುದನ್ನು ಫೋಟೊಗಳು ದೃಢೀಕರಿಸುತ್ತವೆ ಎಂದು ಇದ್ರೀಸ್ ಪಾಶ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw