ಅಜ್ಞಾತ ಸ್ಥಳದಿಂದ ಸವಾಲು ಹಾಕಿದ ಪುನೀತ್ ಕೆರೆಹಳ್ಳಿ: ಅಚ್ಚರಿಗೆ ಕಾರಣವಾದ ಪೊಲೀಸರ ನಡೆ

ರಾಮನಗರ: ಕನಕಪುರದ ತಾಲೂಕಿನ ಸಾತನೂರಿನಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಯ ತನಿಖೆ ಚುರುಕುಗೊಂಡಿದ್ದು, ಸೋಮವಾರ ಸಂಜೆ ಐಜಿಪಿ ರವಿಕಾಂತೇಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಸ್ಥಳೀಯರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಹಾಗೂ ಗ್ಯಾಂಗ್ ದಾಳಿ ನಡೆಸಿದ ಬಳಿಕ ಇದ್ರೀಷ್ ಪಾಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಪುನೀತ್ ಕೆರೆಹಳ್ಳಿ ಮತ್ತು ಗ್ಯಾಂಗ್ ರಾತ್ರಿ ವೇಳೆ ರಾಜಾರೋಷವಾಗಿ ವಾಹನಗಳನ್ನು ತಡೆದು ಗೋವು ಸಾಗಾಟ ಮಾಡುತ್ತಿರುವವರ ಮೇಲೆ ದಾಳಿ ನಡೆಸುವುದು ಮತ್ತು ವಿದ್ಯುತ್ ಶಾಕ್ ನೀಡುವ ಉಪಕರಣಗಳನ್ನು ಬಳಸಿ ಚಿತ್ರಹಿಂಸೆ ನೀಡುತ್ತಿರುವ ಗಂಭೀರವಾದ ಆರೋಪ ಕೇಳಿ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಸಾಕಷ್ಟು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.
ಪುನೀತ್ ಕೆರೆಹಳ್ಳಿ ಬಂಧನಕ್ಕೆ ಮೀನಾ ಮೇಷಾ:
ಮಂಡ್ಯ ಮೂಲದ ಇದ್ರಿಷ್ ಪಾಷಾ ಸಾವಿಗೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಗ್ಯಾಂಗ್ ಕಾರಣವಾಗಿರಬಹುದು ಅನ್ನೋದಕ್ಕೆ ಗಂಭೀರವಾದ ವಿಡಿಯೋ ಸಾಕ್ಷಿಗಳು ದೊರೆತರೂ, ಈವರೆಗೆ ಪುನೀತ್ ಕೆರೆಹಳ್ಳಿ ಬಂಧನ ಯಾಕೆ ಆಗಿಲ್ಲ ಅನ್ನೋ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿವೆ. ಪುನೀತ್ ಕೆರೆಹಳ್ಳಿ ಬಿಜೆಪಿಯ ಪ್ರಭಾವಿಗಳೊಂದಿಗೆ ಸಂಪರ್ಕದಲ್ಲಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಅನುಮಾನಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸಚಿವರು, ಸಂಸದರು ಹಾಗೂ ಮುಖಂಡರ ಜೊತೆಗೆ ಪುನೀತ್ ಕೆರೆಹಳ್ಳಿ ಇರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದೆ.
ರಾಜಾರೋಷವಾಗಿ ತಿರುಗಾಡುತ್ತಿರುವ ಪುನೀತ್ ಕೆರೆಹಳ್ಳಿ:
ಪುನೀತ್ ಕೆರೆಹಳ್ಳಿ ಹಾಗೂ ಆತನ ಗ್ಯಾಂಗ್ ಗೋಸಾಗಾಟದ ವಾಹನ ತಡೆದು ದಾಂಧಲೆ ನಡೆಸಿದ ಬಳಿಕ ಇದ್ರಿಷ್ ಪಾಷಾ ಸಾವಿಗೀಡಾಗಿದ್ದ. ಇದಾದ ಬಳಿಕ ಅಜ್ಞಾತ ಸ್ಥಳದಲ್ಲಿ ಅವಿತಿದ್ದ ಪುನೀತ್ ಕೆರೆಹಳ್ಳಿ ಇದೀಗ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಕಾರೊಂದರಲ್ಲಿ ಕುಳಿತು ವಿಡಿಯೋ ಹರಿಯಬಿಟ್ಟಿರುವ ಪುನೀತ್ ಕೆರೆಹಳ್ಳಿ, ವಿಪಕ್ಷ ನಾಯಕರು ಘಟನೆ ಸಂಬಂಧ ನೀಡಿರುವ ಹೇಳಿಕೆಗೆ ಕಿಡಿಕಾರಿದ್ದಾನೆ. ಎಫ್ ಐ ಆರ್ ಕಾಪಿಯನ್ನು ಪೊಲೀಸರಿಂದ ಎಡಿಟ್ ಮಾಡಲಾಗಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾನೆ.
ಅಚ್ಚರಿಗೆ ಕಾರಣವಾದ ಪೊಲೀಸರ ನಡೆ:
ಗೋವು ಸಾಗಾಟದ ವಾಹನದಲ್ಲಿದ್ದ ವ್ಯಕ್ತಿಯೋರ್ವ ಪುನೀತ್ ಕೆರೆಹಳ್ಳಿ ಹಾಗೂ ಗ್ಯಾಂಗ್ ದಾಳಿ ನಡೆಸಿದ ಕೆಲವೇ ಹೊತ್ತಿನ ಬಳಿಕ ಶವವಾಗಿ ಪತ್ತೆಯಾಗುತ್ತಾನೆ. ಗೋ ಸಾಗಾಟಗಾರರನ್ನು ಹಿಂಸಿಸುತ್ತಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗುತ್ತಿದೆ. ಜೊತೆಗೆ ಪುನೀತ್ ಕೆರೆಹಳ್ಳಿ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ. ಇಷ್ಟೆಲ್ಲ ಘಟನೆ ನಡೆದರೂ, ಪೊಲೀಸರು ಆರೋಪಿಯನ್ನು ಬಂಧಿಸದೇ ರಾಜಾರೋಷವಾಗಿ ತಿರುಗಾಡಲು ಯಾಕೆ ಬಿಟ್ಟಿದ್ದಾರೆ ಅನ್ನೋ ಪ್ರಶ್ನೆಗಳು ರಾಜ್ಯದಾದ್ಯಂತ ಕೇಳಿ ಬಂದಿದೆ. ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಗಂಭೀರವಾದ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಯಾಕೆ ಮೌನ ವಹಿಸಿದ್ದಾರೆ ಅನ್ನೋ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw