ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಏಕಾಏಕಿ ಹುಚ್ಚನಾದ | 3 ವರ್ಷದ ತನ್ನ ಮಗಳನ್ನೇ ಬಲಿ ಪಡೆದ
ಭುವನೇಶ್ವರ: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರ ಮಾನಸಿ ಆರೋಗ್ಯ ಬಿಗಡಾಯಿಸಿದ್ದು, ಪರಿಣಾಮವಾಗಿ ಭಾರೀ ಅನಾಹುತವೊಂದು ನಡೆದು ಹೋಗಿದೆ. ಯಾವುದೇ ಮಾದಕ ವ್ಯಸನವಿಲ್ಲದೇ, ತನ್ನ ಕುಟುಂಬವನ್ನು ಬಹಳಷ್ಟು ಪ್ರೀತಿಸುತ್ತಿದ್ದ ವ್ಯಕ್ತಿಯೋರ್ವ ಏಕಾಏಕಿ ತನ್ನ ಕುಟುಂಬದ ಮೇಲೆಯೇ ತಿರುಗಿ ಬಿದ್ದಿದ್ದು, ತನ್ನ ಮೂರು ವರ್ಷದ ಮಗಳನ್ನು ಕೊಂದು ಹಾಕಿದ್ದಾನೆ.
54 ವರ್ಷ ವಯಸ್ಸಿನ ಸುಕು ಕುಜೂರ್, ಕೂಲಿ ಕಾರ್ಮಿಕರಾಗಿದ್ದರು. ಇವರಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಮ್ಮ ಕುಟುಂಬವನ್ನು ಅವರು ಬಹಳಷ್ಟು ಪ್ರೀತಿಸುತ್ತಿದ್ದರು. ಜೂನ್ 5ರಂದು ಅವರಿಗೆ ಕೊವಿಡ್ ಪಾಸಿಟಿವ್ ಬಂದ ಬಳಿಕ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದರು.
ಕ್ವಾರಂಟೈನ್ ಸಂದರ್ಭದಲ್ಲಿ ತನ್ನು ಕುಟುಂಬಸ್ಥರು ಯಾರ ಜೊತೆಗೂ ಅವರಿಗೆ ಸಂಪರ್ಕ ಇರಲಿಲ್ಲ, ಪತ್ನಿ ಆಹಾರವನ್ನು ಕೋಣೆಯ ಬಾಗಿಲಿನಲ್ಲಿಟ್ಟು ಹೋಗುತ್ತಿದ್ದರು. ಘಟನೆ ನಡೆದ ದಿನ ಕೂಡ ಕುಜೂರ್ ಅವರ ಪತ್ನಿ ಆಹಾರ ನೀಡಿ ತನ್ನ ಮಕ್ಕಳ ಜೊತೆಗೆ ಮಲಗಿದ್ದರು.
ಮಧ್ಯರಾತ್ರಿಯ ವೇಳೆಗೆ ಕೂಜೂರ್ ತನ್ನ ಕೋಣೆಯಿಂದ ಹೊರಗೆ ಬಂದಿದ್ದಾನೆ. ತಾನು ಬಹಳಷ್ಟು ಪ್ರೀತಿಸುತ್ತಿದ್ದ ಪತ್ನಿ ಮತ್ತು ಮಕ್ಕಳನ್ನು ಒಂದೇ ಸಮನೆ ಥಳಿಸಲು ಆರಂಭಿಸಿದ್ದಾನೆ. ಇದೇ ವೇಳೆ ತನ್ನ ಕೈಗೆ ಸಿಕ್ಕ ದೊಡ್ಡ ಚಾಕುವನ್ನು ತೆಗೆದುಕೊಂಡು ತನ್ನ ಮೂರು ವರ್ಷದ ಮಗಳು ಸಲೀಮಾ ಕುಜೂರ್ ನ ಕತ್ತು ಸೀಳಿದ್ದಾನೆ.
ಪತಿಯ ವರ್ತನೆ ಕಂಡು ನಡುಗಿ ಹೋದ ಪತ್ನಿ ತಕ್ಷಣ ತನ್ನ ಇನ್ನುಳಿದ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಓಡಿದ್ದಾಳೆ. ತನ್ನ ಸ್ಥಳೀಯರಿಗೆ ನಡೆದ ಘಟನೆಗಳನ್ನು ವಿವರಿಸಿದ್ದಾಳೆ. ಅವರು ತಕ್ಷಣವೇ ಬಂದು ಮನೆಯ ಬಾಗಿಲನ್ನು ಮುಚ್ಚಿ ಆರೋಪಿಯನ್ನು ಮನೆಯೊಳಗೆ ಬಂಧಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ.
ಇನ್ನೂ ಘಟನೆಯ ಬಗ್ಗೆ ವಿವರಿಸಿದ ಆರೋಪಿಯ ಪತ್ನಿ, ನನ್ನ ಪತಿ ಎಂದಿಗೂ ನನ್ನನ್ನು ಅಥವಾ ಮಕ್ಕಳನ್ನು ಹೊಡೆದವರಲ್ಲ, ಅವರು ಮದ್ಯ ಕೂಡ ಸೇವಿಸುತ್ತಿರಲಿಲ್ಲ. ಲಾಕ್ ಡೌನ್ ನಲ್ಲಿ ಕೆಲಸ ಇಲ್ಲದ ಕಾರಣ ಅವರು ಮಾನಸಿಕವಾಗಿ ತೀವ್ರವಾಗಿ ಬಾಧೆಗೊಳಪಟ್ಟಿದ್ದರು. ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಬಳಿಯಲ್ಲಿ ಹಣಕ್ಕಾಗಿ ಸಾಲ ಕೂಡ ಕೇಳಿದ್ದರು. ಅವರ ಈ ರೀತಿಯ ವರ್ತನೆ ತಾನೆಂದೂ ಕಂಡಿರಲಿಲ್ಲ ಎಂದು ಹೇಳಿದ್ದಾರೆ.