ಆರ್.ಅಶೋಕ್ ಹಿಂದೂ ಆದ್ರೆ, ನಾನು ಶ್ರೇಷ್ಠ ಹಿಂದೂ: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ಆರ್.ಅಶೋಕ್ ಹಿಂದೂ ಆದ್ರೆ, ನಾನು ಶ್ರೇಷ್ಠ ಹಿಂದೂ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ, ಅವರು ಎಲ್ಲರ ಸ್ವತ್ತು ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕನಕದಾಸರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಶಸ್ತ್ರಚಿಕಿತ್ಸೆ ವೇಳೆ ನಮ್ಮ ಜಾತಿಯವರ ರಕ್ತ ಕೊಡಿ ಅಂತಾ ಕೇಳ್ತೀರಾ. ಏನಪ್ಪಾ ರೇಣುಕಾಚಾರ್ಯ ನೀನು ಹೀಗೇನಾದರೂ ಕೇಳ್ತಿಯಾ ಎಂದು ವ್ಯಂಗ್ಯ ಮಾಡಿದ್ದಾರೆ.
ಜೀವ ಉಳಿಸಲು ಮುಸ್ಲಿಮರ ರಕ್ತನಾದರೂ ಕೊಡು, ದಲಿತರ ರಕ್ತನಾದರೂ ಕೊಡು ಎಂದು ಗೋಗರೆಯುತ್ತೇವೆ. ರಕ್ತ ಹಾಕಿಸಿಕೊಂಡು ಬಂದು ಹಿಂದೂ, ಮುಸ್ಲಿಂ ಎಂದು ಹೊಡೆದಾಡುತ್ತೇವೆ ಎಂದರು.
ಕನಕದಾಸರು ಮೊದಲು ತಿಮ್ಮಪ್ಪನಾಯಕ, ಪಾಳೆಗಾರರಾಗಿದ್ದರು. ಬಳಿಕ ಆಸ್ತಿಯನ್ನು ತ್ಯಜಿಸಿ ಭಕ್ತ ಕನಕದಾಸರಾದರು. ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಜನಿಸಿದರು. ಆದರೆ ಕನಕದಾಸರು ಕುರುಬರಾಗಿ ಉಳಿದಿಲ್ಲ, ವಿಶ್ವಮಾನವರಾಗಿದ್ದಾರೆ ಎಂದು ಅವರು ಹೇಳಿದರು.
ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿ ಜನಿಸುತ್ತಾರೆ. ಬೆಳೆಯುತ್ತಾ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನಾವು ಅಲ್ಪಮಾನವರಾಗುತ್ತೇವೆ ಎಂದು ಇದೇ ವೇಳೆ ಕುವೆಂಪು ಅವರ ಮಾತುಗಳನ್ನು ಸಿದ್ದರಾಮಯ್ಯನವರು ನೆನಪಿಸಿದರು.