ಮಾಧ್ಯಮಗಳಿಗೆ ಮುಖ ತಿರುಗಿಸಿದ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಬಗ್ಗೆ ಏನಂದ್ರು ಗೊತ್ತಾ?

eshwarappa
17/06/2021

ಬೆಂಗಳೂರು:  ಸಚಿವ ಕೆ.ಎಸ್.ಈಶ್ವರಪ್ಪನವರು ಮಾಧ್ಯಮಗಳ ಮೇಲೆ ಬೇಸರ ಮಾಡಿಕೊಂಡಿದ್ದು,  ನಾನು ಹೇಳಿರೋದನ್ನು ನೀವು ಉಲ್ಟಾ ತೆಗೆದುಕೊಳ್ಳುತ್ತಿದ್ದೀರಿ, ನೀವೇನೋ ಕೇಳುತ್ತೀರಿ ಅದಕ್ಕೆ ನಾನೇನೋ ಹೇಳುತ್ತೇನೆ. ಅದನ್ನು ಎಲ್ಲರೂ ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಸಂಬಂಧ ರಾಜ್ಯಕ್ಕೆ ಆಗಮಿಸಿರುವ ಅರುಣ್ ಸಿಂಗ್ ಭಿನ್ನಮತ ಶಮನಕ್ಕೆ ಔಷಧಿ ಹಚ್ಚುತ್ತಿದ್ದಾರೆ. ಈ ವಿಚಾರವಾಗಿ ಕೆ.ಎಸ್.ಈಶ್ವರಪ್ಪನವರನ್ನು ಪ್ರಶ್ನಿಸಿದಾಗ ನಾನು ಏನು ಮಾತನಾಡಿದರೂ ನೆಗೆಟಿವ್ ಆಗಿ ರಿಪೋರ್ಟ್ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದಿದ್ದಾರೆ. ಎಲ್ಲ ಸಮಸ್ಯೆ ಪರಿಹಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ  ನೀವೇನೋ ಪ್ರಶ್ನೆ ಕೇಳುತ್ತೀರಿ, ಅದನ್ನೆ ನಾನೇನೋ ಉತ್ತರ ಕೊಡ್ತೀನಿ, ಈಶ್ವರಪ್ಪ ಹಿಂಗೆ ಹೇಳಿದ್ರು… ಅಂತ ನೀವು ವರದಿ ಮಾಡುತ್ತೀರಿ,  ಒಳ್ಳೆಯದಾಗುತ್ತಿರುವ ಸಂದರ್ಭದಲ್ಲಿ ನಾನು ಹೇಳಿರುವುದನ್ನು ಸರಿಯಾಗಿ ತಗೊಳೋದು ಬಿಟ್ಟು,  ಉಲ್ಟಾ ತೆಗೆದುಕೊಂಡರೆ ನಾನೇನು ಮಾಡೋದು? ಅದಕ್ಕೆ ನಾನು ಏನು ಹೇಳಲ್ಲ… ಎಂದು ಮಾಧ್ಯಮಗಳಿಗೆ ಮುಖ ತಿರುಗಿಸಿದರು.

ಅರುಣ್ ಸಿಂಗ್ ಅವರು ಇನ್ನೂ ಬೆಂಗಳೂರಿನಲ್ಲೇ ಇದ್ದಾರೆ. ಅವರು ಹೋದ ಮೇಲೆ ಎಲ್ಲ ಸರಿಹೋಗುತ್ತೆ, ಎಂದು ಈಶ್ವರಪ್ಪನವರು ಹೊರಡಲು ಅನುವಾಗಿದ್ದು, ಈ ವೇಳೆ,  ರಮೇಶ್ ಜಾರಕಿಹೊಳಿ ಸಚಿವರಾಗುತ್ತಾರಾ? ಎಂದು ಪತ್ರಕರ್ತರು ಪ್ರಶ್ನಿಸಿದ್ದು,  ಪ್ರೈಮ್ ಮಿನಿಸ್ಟರ್ ಆಗ್ಲಿ ಏನ್ ತಪ್ಪು? ಎಂದು ಪ್ರಶ್ನಿಸಿ ಈಶ್ವರಪ್ಪ ತೆರಳಿದರು.

ಇತ್ತೀಚಿನ ಸುದ್ದಿ

Exit mobile version