ವಿದ್ಯಾರ್ಥಿಗೆ ರಾಗಿಂಗ್: ಖಾಸಗಿ ಕಾಲೇಜಿನ 9 ವಿದ್ಯಾರ್ಥಿಗಳ ಬಂಧನ
ಮಂಗಳೂರು: ವಿದ್ಯಾರ್ಥಿಗೆ ರಾಗಿಂಗ್ ಮಾಡಿದ ಆರೋಪದಲ್ಲಿ ನಗರದ ಖಾಸಗಿ ಕಾಲೇಜಿನ 9 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದ್ದು, ಬಂಧಿತರು ಹಾಗೂ ಆರೋಪಿ ವಿದ್ಯಾರ್ಥಿಗಳೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
19-20-21 ವಯೋಮಿತಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿದ ಆರೋಪಿಗಳಾಗಿದ್ದು, ಜಿಷ್ಣು, ಶ್ರೀಕಾಂತ್, ಅಶ್ವಥ್, ಸಾಯಿನಾಥ್, ಅಭಿರತ್ ರಾಜೀವ್, ರಾಹುಲ್, ಮುಕ್ತಾರ್ ಅಲಿ, ಮಹಮ್ಮದ್ ರಝೀಮ್ ಬಂಧಿತ ವಿದ್ಯಾರ್ಥಿಗಳಾಗಿದ್ದಾರೆ.
ಮೊದಲ ವರ್ಷ ವಿದ್ಯಾರ್ಥಿಯೊಬ್ಬನಿಗೆ ತಲೆಗೂದಲು ಹಾಗೂ ಮೀಸೆ ತೆಗೆದು ಬರುವಂತೆ ಆರೋಪಿಗಳು ಹೇಳಿದ್ದು, ಆದರೆ ಆತ ಹಾಗೆ ಮಾಡಿಲ್ಲ ಎಂದು ಆಕ್ರೋಶಗೊಂಡ ಗುಂಪು ವಿದ್ಯಾರ್ಥಿಗೆ ಹಲ್ಲೆ ನಡೆಸಿದೆ. ಇದಾದ ಬಳಿಕವೂ ಐದಾರು ದಿನಗಳ ಕಾಲ ನಿರಂತರವಾಗಿ ಆತನ ಮೇಲೆ ರಾಗಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿವಿಧ ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.