ಜನಸಂಪರ್ಕ ಕಾರ್ಯಕ್ರಮಗಳಿಗೆ ರಾಹುಲ್ ಗಾಂಧಿ ಒತ್ತು: ಚಾಕಲೇಟ್ ಕಂಪನಿಗೆ ದಿಢೀರ್ ಭೇಟಿ ನೀಡಿದ್ಯಾಕೆ ರಾಗಾ..?
ಕೇರಳದ ವಯನಾಡ್ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿಗಂತೂ ಹೆಚ್ಚಾಗಿ ಜನ ಸಂಪರ್ಕ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸುತ್ತಿದ್ದಾರೆ. ಅವರು ಇತ್ತೀಚೆಗೆ ಊಟಿಗೆ ತೆರಳಿದ್ದರು. ವಯನಾಡಿಗೆ ಹೋಗುವಾಗ ದಾರಿಯಲ್ಲಿ ಊಟಿಯಲ್ಲಿರುವ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ. ಅಲ್ಲಿರುವ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅಲ್ಲಿನ ಕಾರ್ಮಿಕರೊಂದಿಗೆ ಬೆರೆತು, ಚಾಕಲೇಟ್ ತಯಾರಿಸುವುದನ್ನು ಕಲಿತುಕೊಂಡರು.
ಚಾಕಲೇಟ್ ಫ್ಯಾಕ್ಟರಿಯಲ್ಲಿರುವ ಕಾರ್ಮಿಕರೆಲ್ಲರೂ ಮಹಿಳೆಯರೇ ಎಂಬುದು ರಾಹುಲ್ ಗಾಂಧಿ ತಿಳಿದುಕೊಂಡರು. ಅಲ್ಲದೇ ಅವರು ಅಲ್ಲಿನ ಮಹಿಳಾ ಕಾರ್ಮಿಕರನ್ನು ಹೊಗಳಿದರು. ಆ ಕಾರ್ಖಾನೆಯಲ್ಲಿ ಸುಮಾರು 70 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಚಾಕಲೇಟ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರುವ ಚಾಕಲೇಟ್ ರುಚಿ ನೋಡಿದ ರಾಹುಲ್ ಗಾಂಧಿ ಗುಣಗಾನ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ರಾಹುಲ್ ಗಾಂಧಿ ಅವರು ಚಾಕೊಲೇಟ್ ಫ್ಯಾಕ್ಟರಿಯಲ್ಲಿದ್ದಾಗ ಶೇರ್ ಮಾಡಿದ್ದಾರೆ.
ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರೊಂದಿಗೆ ಚಾಕಲೇಟ್ ಮಾಡುವುದನ್ನು ನಾನು ಕಲಿತೆ. ಆ ಮಹಿಳೆಯರಿಗೆ ಸರಿಸಮಾನವಾಗಿ ನಿಂತು ಚಾಕಲೇಟ್ ತಯಾರಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಹೇಳಿದ್ದಾರೆ.
ಈ ಕಾರ್ಖಾನೆ ತಯಾರಿಸುವ ಹೋಂ ಮೇಡ್ ಚಾಕಲೇಟ್ ಗೆ ಎಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ಕಾರ್ಖಾನೆ ಮಾಲೀಕರನ್ನು ರಾಹುಲ್ ಕೇಳಿ ತಿಳಿದುಕೊಂಡರು. ಶೇ. 18 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ತಿಳಿದ ರಾಹುಲ್, ಈ ಸಮಸ್ಯೆ ಕೇವಲ ನಿಮ್ಮದಲ್ಲ, ಇಡೀ ದೇಶಕ್ಕೆ ಇದೆ ಎಂದು ಹೇಳಿದರು. ಬಳಿಕ ರಾಹುಲ್ ಕಾರ್ಮಿಕರೊಬ್ಬರ ಮಗುವಿಗೆ ಆಟೋಗ್ರಾಫ್ ನೀಡಿ, ಫೋಟೋ ತೆಗೆಸಿಕೊಂಡು ಖುಷಿಪಟ್ರು.