ರಾಗಾ ಧಾರ್ಮಿಕ ಯಾತ್ರೆ: ಆದಿ ಶಂಕರಾಚಾರ್ಯರ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನ ಬಡಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆದಿ ಶಂಕರಾಚಾರ್ಯ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಅನ್ನ ಬಡಿಸುವ ಮೂಲಕ ಗಮನ ಸೆಳೆದರು.
ಪಂಚರಾಜ್ಯಗಳ ಚುನಾವಣೆಯ ಮಧ್ಯೆಯೇ ಉತ್ತರಾಖಂಡಕ್ಕೆ 3 ದಿನಗಳ ಕಾಲ ರಾಹುಲ್ ಗಾಂಧಿ ಅವರು ಈ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಅವರು ಕೇದಾರಪುರಿಯಲ್ಲಿರುವ ಭೈರವನಾಥ ಹಾಗೂ ಶಂಕರಾಚಾರ್ಯ ದೇವಸ್ಥಾನದ ದರ್ಶನ ಮಾಡಿದರು. ನಂತರ ಆದಿ ಶಂಕರಾಚಾರ್ಯರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಕೇದಾರನಾಥದ ಲಂಗರ್ನಲ್ಲಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು.
ಭಕ್ತರಿಗೆ ಅನ್ನ ಬಡಿಸುವ ಮೂಲಕ ರಾಹುಲ್ ಗಾಂಧಿ ಭಕ್ತಿಯ ಸೇವೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಯಾತ್ರಾರ್ಥಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡು ಬಂತು. ಮೂರು ದಿನಗಳ ಉತ್ತರಾಖಂಡ ಪ್ರವಾಸದ ನಂತರ ನವೆಂಬರ್ 7 ರಂದು ರಾಹುಲ್ ಗಾಂಧಿ ಅವರು ದೆಹಲಿಗೆ ವಾಪಸಾಗಲಿದ್ದಾರೆ.
ಭಾನುವಾರ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೊದಲ ದಿನ ಸಂಜೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಅರ್ಚಕರು ಹಾಗೂ ಯಾತ್ರಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ನಂತರ ಕೇದಾರನಾಥಕ್ಕೆ ಬರುವ ಯಾತ್ರಾರ್ಥಿಗಳಿಗೆ ಚಹಾ ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ.