“ರೈತರ ಮೇಲೆ ಸರ್ಕಾರ ಮತ್ತು ಬಂಡವಾಳ ಶಾಹಿಗಳ ಶೋಷಣೆ ನಿಲ್ಲಲಿ” - Mahanayaka

“ರೈತರ ಮೇಲೆ ಸರ್ಕಾರ ಮತ್ತು ಬಂಡವಾಳ ಶಾಹಿಗಳ ಶೋಷಣೆ ನಿಲ್ಲಲಿ”

govinde gowda
23/06/2021

ಶಿಡ್ಲಘಟ್ಟ: ದೇಶ ಇಂದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಕರೋನಾದಂತಹ ಕಷ್ಟ ಕಾಲದಲ್ಲೂ ರೈತ ತನ್ನ ಪ್ರಾಣವನ್ನು ಲೆಕ್ಕಿಸದೆ ಆಹಾರದ ಉತ್ಪಾದನೆಯಲ್ಲ ತೊಡಗಿದ್ದು, ಸರ್ಕಾರ ಮತ್ತು ಬಂಡವಾಳ ಶಾಹಿಗಳಿಂದ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇ ಗೌಡ ತಿಳಿಸಿದರು.

ತಾಲ್ಲೂಕಿನ ಸಾದಲಿ ಗ್ರಾಮದ ಪ್ರಾಥಮಿಕ ಮತ್ತು ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅವಿಭಾಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಮತ್ತು ಮಳೆಯ ತೀವ್ರ ಅಭಾವ ಇದ್ದರೂ ಸಹ ಲಭ್ಯವಾಗುವ ಅಲ್ಪ ಸ್ವಲ್ಪ ನೀರಿನಲ್ಲಿ ಶ್ರಮವಹಿಸಿ ಆಹಾರ ಉತ್ಪಾದನೆ ಮಾಡುತ್ತಿದು, ಇಡೀ ರಾಷ್ಟ್ರದಲ್ಲೇ ಸಾಲ ಮರುಪಾವತಿಯಲ್ಲಿ ಈ ತಾಲ್ಲೂಕು ಶೇ 100 ರಷ್ಟು ಸಾದನೆ ಮಾಡಿರುವುದು ಶ್ಲಾಘನೀಯ ಎಂದರು.  ದೇಶದ ನೂರಾರು ಬ್ಯಾಂಕುಗಳಲ್ಲಿ ಉದ್ದಿಮೆದಾರರು ಕೋಟ್ಯಾಂತರ ರೂಗಳ ಸಾಲ ಪಡೆದು ಮರುಪಾವತಿ ಮಾಡದೆ ದಿವಾಳಿಯನ್ನು ಘೋಷಿಸಿಕೊಂಡಿದ್ದು, ಅಪರಾದಿಗಳಾಗಿ ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದರು.

ಜಿಲ್ಲೆಯಲ್ಲಿನ ರೈತರು ಕರೋನಾದಂತಹ ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ಶ್ರಮ ವಹಿಸಿ ದೇಶದ ಆರ್ಥಿಕ ಪರಿಸ್ಥಿತಿಗೆ ಹಾಗೂ ಆಹಾರ ಉತ್ಪಾದನೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು,  ದೇಶದ ಎಲ್ಲೆಡೆ ರೈತರು ಪಡೆದ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಪಡಿಸುತ್ತಿದ್ದರೆ, ಈ ಬಾಗದ ರೈತರು 100 ಕ್ಕೆ 100 ರಷ್ಟು ಸಾಲ ಮರುಪಾವತಿ ಮಾಡುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ತಮ್ಮ ಬ್ಯಾಂಕಿನ ವತಿಯಿಂದ ತಾಲ್ಲೂಕಿನ ಪ್ರತಿ ಗ್ರಾಮದ ಮನೆ ಮನೆಗೂ ತೆರಳಿ ಫಲಾನುಭವಿಗಳನ್ನು ಗುರುತಿಸಿ ಪ್ರತಿ ಸಹಕಾರಿ ಸಂಘಕ್ಕೂ 10 ಕೋಟಿ ರೂಗಳ ಸಾಲ ವಿತರಣಾ ಯೋಜನೆಯನ್ನು ಸಿದ್ದಪಡಿಸುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ.ಮುನಿಯಪ್ಪ ದೇಶದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಶ್ರೀಮಂತ ಉದ್ದಿಮೆದಾರರೇ ಪಡೆದ ಸಾಲವನ್ನು ಹಿಂತಿರಿಗಿಸಲು ಹಿಂದೆ ಮುಂದೆ ನೋಡುತ್ತಿದ್ದು, ನಮ್ಮ ತಾಲ್ಲೂಕಿನ ರೈತರು ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಸಹಕಾರಿ ಬ್ಯಾಂಕಿನ ಉಪಾದ್ಯಕ್ಷ ಡಾಲ್ಪಿನ್ ನಾಗರಾಜ್ ಮಾತನಾಡಿ ತಾಲ್ಲೂಕಿನ ಸಹಕಾರಿ ಸಂಘಗಳು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಬೇಡಿಕೆಯಷ್ಟು ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು, ಮನೆ ಬಾಗಿಲಿಗೆ ಬಂದು ಅಲ್ಲೇ ಹಣ ನೀಡುವ, ಹಾಗೂ ಮರುಪಾವತಿ ಮಾಡುವ ಸೌಲಭ್ಯಗಳನ್ನು ಮೊದಲ ಬಾರಿಗೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಾದಲಿ ಪ್ರಾಥಮಿಕ ಸಹಕಾರಿ ಸಂಘದ ಅದ್ಯಕ್ಷ ಅಶ್ವತ್ತರೆಡ್ಡಿ, ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜಣ್ಣ, ಸಂಘದ ಉಪಾದ್ಯಕ್ಷ ಲಕ್ಷೀಪತಿ, ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ