ರೈತರಿಗೆ ಸಿಹಿ ಸುದ್ದಿ: ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಳ
05/02/2021
ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 2 ರೂ. ನೀಡಲು ನಿರ್ಧರಿಸಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಕೊರೊನಾ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತಗೊಳಿಸಲಾಗಿತ್ತು. ಇದೀಗ ಶೇ.4.2 ಜಿಡ್ಡಿನಾಂಶ ಇರುವ ಹಾಲಿಗೆ 2 ರೂ. ಏರಿಕೆ ಮಾಡಿ, ಪ್ರತಿ ಲೀಟರ್ ಗೆ 27.40ರೂ.ನಂತೆ ಖರೀದಿಸಲಿದ್ದು, ಫೆ.6ರಿಂದ ಇದು ಜಾರಿಗೆ ಬರಲಿದೆ.
ಈ ಯೋಜನೆಯಿಂದ ಸುಮಾರು 1.50 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಬಮುಲ್ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದ್ದಾರೆ. ಇನ್ನೂ ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಿಸುವಂತೆ ಕೆಎಂಎಫ್ ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮುಲ್ ಮಾಜಿ ಅಧ್ಯಕ್ಷ ಆಂಜಿನಪ್ಪ ತಿಳಿಸಿದ್ದಾರೆ.