ಪ್ರತೀ ದಿನ 800ಕ್ಕೂ ಅಧಿಕ ಬೀದಿ ನಾಯಿಗಳಿಗೆ ಊಟ ಹಾಕುವ ರಜನಿ ಶೆಟ್ಟಿ ಪ್ರೆಸ್ ಕ್ಲಬ್ ನ ವರ್ಷದ ಪ್ರಶಸ್ತಿಗೆ ಆಯ್ಕೆ
ಪ್ರತಿದಿನ 800ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುವ, ತನ್ನ ಮನೆಯಲ್ಲೇ 55 ಬೀಡಾಡಿ ನಾಯಿ, 15 ಬೆಕ್ಕು, 11 ಗಿಡುಗ, ದನ, ಕಾಗೆ, ಕೋಗಿಲೆ, ಆಮೆ, ಮೊಲಗಳನ್ನು ಸಾಕಿ ಸಲಹುತ್ತಿರುವ ಮಂಗಳೂರು ಬಲ್ಲಾಳ್ ಬಾಗ್ ನಿವಾಸಿ ರಜನಿ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಂಗಳೂರು ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಯು 2022ನೇ ಸಾಲಿನ ಪ್ರಶಸ್ತಿಗೆ ರಜನಿ ಶೆಟ್ಟಿ ಅವರನ್ನು ಆಯ್ಕೆ ನಡೆಸಿದೆ. ಮಾ.5ರಂದು ಮಂಗಳೂರಿನ ಬೊಕ್ಕಪಟ್ಣ ಸಮೀಪದ ಪ್ಯಾರಡೈಸ್ ಐಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ಸಮಾರಂಭದಲ್ಲಿ ರಜನಿ ಶೆಟ್ಟಿಯವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಜನಿ ಶೆಟ್ಟಿ ಪರಿಚಯ:
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಪುಟ್ಟ ಬಾಡಿಗೆ ಮನೆಯಲ್ಲಿ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ರಜನಿ ಶೆಟ್ಟಿ, ತಮ್ಮ ಮನೆಯನ್ನು ಗಾಯಗೊಂಡ, ರೋಗಗ್ರಸ್ತ ನಾಯಿ, ಬೆಕ್ಕು, ಹಕ್ಕಿಗಳಿಗೆ ಮೀಸಲಿಟ್ಟಿದ್ದಾರೆ.
ಬೀದಿ ಬದಿ ಬರಡಾಗುವ ಬದುಕು, ವಾಹನಗಳ ಅಡಿಗೆ ಸಿಲುಕಿಯೋ, ಯಾವುದಾದರೂ ವಿಷ ತಿಂದು ಸಾಯುವ ಪರಿಸ್ಥಿತಿಯ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಮನಗಂಡು, ತಮ್ಮ ಪಾಡಿಗೆ ಸದ್ದಿಲ್ಲದೆ ಪ್ರಾಣಿಗಳ ಸೇವೆ ಮಾಡಿಕೊಂಡು ಬಂದವರು ರಜನಿ ಶೆಟ್ಟಿ.
ನಾಯಿ, ಬೆಕ್ಕು ಬಾವಿಗೆ ಬಿದ್ದಾಗ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಬರುವ ಮೊದಲೇ ದೂರವಾಣಿ ಕರೆ ಸ್ವೀಕರಿಸಿ, ಸರ ಸರನೆ ಬಾವಿಗಿಳಿದು ಮೇಲೆತ್ತುವುದರಲ್ಲಿ ರಜನಿ ಶೆಟ್ಟಿಯವರದ್ದು ಎತ್ತಿದ ಕೈ. ಅನೇಕ ನಾಯಿ, ಬೆಕ್ಕುಗಳನ್ನು ಅವರು ರಕ್ಷಣೆ ಮಾಡಿದ್ದಾರೆ. ಮರ ಕಡಿಯುವಾಗ ಗಾಯಗೊಂಡ ಹಕ್ಕಿಗಳನ್ನೂ ಅವರು ತಮ್ಮ ಮನೆಯ ಗೂಡಿನಲ್ಲಿರಿಸಿ ಆರೈಕೆ ಮಾಡುತ್ತಾರೆ. ಗಿಳಿ, ಹದ್ದುಗಳಿಗೂ ರಜನಿಯಕ್ಕನ ಮನೆಯಲ್ಲಿ ಆಸರೆ ಸಿಕ್ಕಿದೆ.
ರಜನಿ ಅವರ ಮನೆಯಲ್ಲಿ ಪ್ರತಿದಿನ 60 ಕೆಜಿ ಅಕ್ಕಿಯಿಂದ ಚಿಕನ್ ಮಿಶ್ರಿತ ಅನ್ನ ಬೇಯುತ್ತಿರುತ್ತದೆ. ಇದನ್ನು ಅವರು 800ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸುತ್ತಾರೆ. ಮಗಳು ಅಥವಾ ಪತಿ ದಾಮೋದರ್ ಶೆಟ್ಟಿಯವರ ಜೊತೆ ಸ್ಕೂಟರ್ ನಲ್ಲಿ ತೆರಳಿ ನಾಯಿಗಳ ಮೈದಡವಿ, ಊಟ ಹಾಕಿ ಬರುತ್ತಾರೆ. ಗೂಡ್ಸ್ ಶೆಡ್ ನಂತಹ ಮಂಗಳೂರಿನ ಮೂಲೆಗೂ ತೆರಳಿ, ಆಹಾರ ಹಾಕುತ್ತಾರೆ. ರಜನಿಯವರನ್ನು ಕಂಡ ಕೂಡಲೇ ನಾಯಿಗಳು ಬಾಲವನ್ನಾಡಿಸುತ್ತಾ ಓಡೋಡಿ ಬಂದು ಸುತ್ತುವರಿದು ಪ್ರೀತಿ ತೋರುತ್ತವೆ.
16 ವರ್ಷಗಳಿಂದ ನಾಯಿಗಳಿಗೆ ಊಟ ಹಾಕುವ ಅವರು, 2500ರಷ್ಟು ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಆರಂಭದಲ್ಲಿ ಸ್ವಂತ ದುಡಿಮೆಯ ಹಣದಿಂದ ನಾಯಿಗಳಿಗೆ ಊಟ ಬೇಯಿಸಿ ಹಾಕುತ್ತಿದ್ದರೆ, ಈಗ ಬಿರುವೆರ್ ಕುಡ್ಲದಂತಹ ಸಂಘಟನೆಗಳು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಗಾಯಗೊಂಡ ಪ್ರಾಣಿಗಳಿಗೆ ಎನಿಮಲ್ ಕೇರ್ ಟ್ರಸ್ಟ್ ನವರು ಚಿಕಿತ್ಸೆ ನೀಡುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw