1.90 ಕೋಟಿ ರೂ. ಮೌಲ್ಯದ ವಿಮೆ ಪಡೆಯಲು ಪತ್ನಿಯನ್ನೇ ಹತ್ಯೆ ಮಾಡಿದ ಪತಿ!

insurance money
01/12/2022

ಜೈಪುರ: ಪತ್ನಿಯ ಹೆಸರಿನಲ್ಲಿದ್ದ 1.90 ಕೋಟಿ ರೂಪಾಯಿ ಮೌಲ್ಯದ ವಿಮಾ ಮೊತ್ತವನ್ನು ಪಡೆಯಲು ಪತಿಯೋರ್ವ,  ಪತ್ನಿ ಹಾಗೂ ಆಕೆಯ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬುಧವಾರ ನಡೆದಿದೆ.

ಶಾಲು ಎಂಬ ಮಹಿಳೆ ತನ್ನ ಪತಿಯ ಕ್ರೌರ್ಯಕ್ಕೆ ಬಲಿಯಾದ ಮಹಿಳೆಯಾಗಿದ್ದಾಳೆ. 2015ರಲ್ಲಿ ಶಾಲು ಅವರು ಮಹೇಶ್ ಚಂದ್ ಎಂಬಾತನನ್ನು ವಿವಾಹವಾಗಿದ್ದರು. ಇವರಿಗೆ ಒಂದು ಹೆಣ್ಣುಮಗು ಇದೆ. ಮದುವೆಯಾಗಿ 2 ವರ್ಷಗಳ ಬಳಿಕ ಇವರ ಸಂಸಾರದಲ್ಲಿ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಶಾಲು ತನ್ನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದರು.

ಇತ್ತೀಚೆಗೆ ಪತ್ನಿಯನ್ನು ಸಮಾಧಾನ ಮಾಡಿದ್ದ ಮಹೇಶ್ ಚಂದ್ ನಾನೊಂದು ಮಹತ್ಕಾರ್ಯ ಕೈಗೊಂಡಿದ್ದೇನೆ. ಅದು ಯಶಸ್ವಿಯಾಗಬೇಕಾದರೆ, ನೀನು 11 ದಿನಗಳ ಕಾಲ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ವೃತ ಆಚರಿಸಬೇಕು ಎಂದು ಹೇಳಿದ್ದ. ಪತಿಯ ಮನಸ್ಸಿನಲ್ಲೇನಿದೆ ಅನ್ನೋದು ತಿಳಿಯದ ಶಾಲು ತನ್ನ ಪತಿಯ ಮನೆಗೆ ಆಗಮಿಸಿದ್ದರು. ಬಳಿಕ ಮೊದಲ ದಿನ ಬೆಳಗ್ಗೆ 4:45ರ ವೇಳೆ ತಮ್ಮ ಸಹೋದರ ಸಂಬಂಧಿ ಯುವಕನ ಜೊತೆಗೆ ಇಲ್ಲಿನ ಹನುಮಂತ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರೊಂದು ಇವರ ಬೈಕ್ ಗೆ ಡಿಕ್ಕಿಯಾಗಿದ್ದು, ಪರಿಣಾಮವಾಗಿ ಶಾಲು ಸ್ಥಳದಲ್ಲೇ ಮೃತಪಟ್ಟರೇ, ಆಕೆಯ ಸಹೋದರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಈ ಪ್ರಕರಣ ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದಿತ್ತು. ಈ ನಡುವೆ ಪೊಲೀಸರಿಗೆ ಪತಿ ಮಹೇಶ್ ಚಂದ್ ಮೇಲೆ ಅನುಮಾನ ಬಂದಿದ್ದು, ಆತನನ್ನು ವಿಚಾರಿಸುತ್ತಿದ್ದಂತೆಯೇ ಪೊಲೀಸರ ಅನುಮಾನ ದಟ್ಟವಾಗಿದೆ. ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಪತ್ನಿ ತವರಿನಲ್ಲಿರುವ ಸಂದರ್ಭದಲ್ಲಿ  ಮಹೇಶ್ ಚಂದ್ ಆಕೆಯ ಹೆಸರಿನಲ್ಲಿ 1.90 ಕೋಟಿ ರೂಪಾಯಿಯ ವಿಮೆ ಮಾಡಿಸಿದ್ದ. ಈ ವಿಮೆಯ ಹಣವನ್ನು ಪಡೆಯುವ ಉದ್ದೇಶದಿಂದ ಪತ್ನಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾನೆ. ಅದಕ್ಕಾಗಿ ವೃತ ಆಚರಣೆಯ ನೆಪದಲ್ಲಿ ಪತ್ನಿಯನ್ನು ಕರೆಸಿಕೊಂಡಿದ್ದು, ಬಳಿಕ ಪತ್ನಿಯನ್ನು ಹತ್ಯೆ ಮಾಡುವಂತೆ ರೌಡಿ ಶೀಟರ್ ವೋರ್ವನಿಗೆ 10 ಲಕ್ಷ ರೂಪಾಯಿ ಸುಪಾರಿ ನೀಡಿದ್ದು, ಪತ್ನಿ ಹಾಗೂ  ಹಾಗೂ ಆಕೆಯ ಸಹೋದರ ಸಂಬಂಧಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಕಾರಿನಿಂದ ಡಿಕ್ಕಿ ಹೊಡೆಸಿ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪತಿ ಮಹೇಶ್ ಚಂದ್ ಹಾಗೂ ಸುಪಾರಿ ಪಡೆದು ಇಬ್ಬರನ್ನು ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version